More

    ಮಾಡೆಲ್​ಗಳಿಬ್ಬರ ದುರಂತ ಸಾವು​: ಆರೋಪಿ ಮೊಬೈಲ್​ನಲ್ಲಿ ಪತ್ತೆಯಾಯ್ತು ಭಯಾನಕ ವಿಡಿಯೋಗಳು!

    ಕೊಚ್ಚಿ: ಕೇರಳದ ಮಾಡೆಲ್​ಗಳಿಬ್ಬರ ಜೀವ ಕಸಿದ ಕಾರು ಅಪಘಾತ ಪ್ರಕರಣ ಸದ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಪೊಲೀಸರು ತಾರ್ಕಿಕ ಅಂತ್ಯ ಹಾಡಿದರೂ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲಿಂದಲೂ ಈ ಪ್ರಕರಣದ ಮೇಲೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮಾಡೆಲ್​ಗಳು ಪಾಲ್ಗೊಂಡಿದ್ದ ಡಿಜಿ ಪಾರ್ಟಿ ನಡೆದ ಹೋಟೆಲ್​ ಮಾಲೀಕನ ನಡೆ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್​ ಮಾಡಿದ್ದ ಆಡಿ ಕಾರು, ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಆದರೆ, ಇದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ನಡೆದ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆಯಲು ಪೊಲೀಸರು ಪ್ರಯತ್ನಿಸಿದರೂ, ಅಪಘಾತಕ್ಕೀಡಾದ ಕಾರು ಚಾಲಕನ ಹೇಳಿಕೆ ಹಾಗೂ ಹೋಟೆಲ್​ ಮಾಲೀಕನ ನಿಗೂಢ ನಡೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿತ್ತು. ಇದೀಗ ಆರೋಪಿಯೊಬ್ಬನ ಮೊಬೈಲ್​ನಲ್ಲಿ ಪತ್ತೆಯಾಗಿರುವ ವಿಡಿಯೋಗಳು ಪ್ರಕರಣವನ್ನು ಮತ್ತಷ್ಟು ಗಂಭೀರತೆಗೆ ನೂಕಿದೆ.

    ಅಪಘಾತವಾದ ದಿನ ಮಾಡೆಲ್​ಗಳಿದ್ದ ಕಾರನ್ನು ಹಿಂಬಾಲಿಸಿದ್ದ ಶಂಕಿತ ಡ್ರಗ್ಸ್​ ಪೆಡ್ಲರ್​ ಸೈಜು ಥಾಂಕಚನ್​ ಮೊಬೈಲ್​ನಲ್ಲಿ ಪ್ರಕರಣಕ್ಕೆ ಬೇಕಾದ ಮಹತ್ವದ ಮಾಹಿತಿ ಕೇರಳ ಪೊಲೀಸರಿಗೆ ಸಿಕ್ಕಿದೆ. ಅಲ್ಲದೆ, ಫೋರ್ಟ್​ ಕೊಚ್ಚಿಯಲ್ಲಿರುವ ನಂ. 18 ಹೋಟೆಲ್​ನಲ್ಲಿ ಆಯೋಜಿಸಲಾಗಿದ್ದ ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಮೊಬೈಲ್​ಗಳಿಂದ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಸೈಜು ಕೂಡ ಅದೇ ದಿನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಪಾರ್ಟಿ ಮುಗಿದ ಬೆನ್ನಲ್ಲೇ ಮಾಡೆಲ್​ಗಳಿಬ್ಬರನ್ನು ತನ್ನ ಐಷಾರಾಮಿ ಆಡಿ ಕಾರಿನಲ್ಲಿ ಸೈಜು ಹಿಂಬಾಲಿಸಿದ್ದ. ಅದೇ ದಿನ ಮಾಡೆಲ್​ಗಳಿದ್ದ ಕಾರು ಅಪಘಾತವಾಗಿತ್ತು.

    ಸೈಜು ಮೊಬೈಲ್​ನಿಂದ ಪಡೆಯಲಾದ ವಿಡಿಯೋಗಳಲ್ಲಿ ಅನೇಕ ಇತರೆ ಯುವತಿಯರು ಇರುವುದು ಪತ್ತೆಯಾಗಿದೆ. ಯುವತಿಯರಿಗೆ ಡ್ರಗ್ಸ್​ ನೀಡುವ ಮೂಲಕ ಮತ್ತು ಬರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬುದು ವಿಡಿಯೋ ಸಾಕ್ಷಿಯಲ್ಲಿರುವುದಾಗಿ ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ಮೊಬೈಲ್ ಫೋನ್‌ನಲ್ಲಿರುವ ದೃಶ್ಯಗಳ ಪ್ರಕಾರ ಕೊಚ್ಚಿಯ ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸೈಜು ಪ್ರಮುಖ ಆಯೋಜಕನಾಗಿದ್ದನು ಎಂಬ ಪೊಲೀಸರ ಹಿಂದಿನ ಅನುಮಾನಗಳಿಗೆ ಪುಷ್ಠಿ ನೀಡಿದೆ. ಅಲ್ಲದೆ, ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಡ್ರಗ್ಸ್​ ಕೂಡ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.

    ಸದ್ಯ ಆರೋಪಿ ಸೈಜು ಪೊಲೀಸ್​ ಕಸ್ಟಡಿಯಲ್ಲಿದ್ದು, ಭಾನುವಾರ ಆತನನ್ನು ವಿವರಣಾತ್ಮಕವಾಗಿ ವಿಚಾರಣೆ ನಡೆಸಲಾಗಿದೆ. ಮೊಬೈಲ್​ನಲ್ಲಿ ಪತ್ತೆಯಾದ ವಿಡಿಯೋದಲ್ಲಿ ಇರುವವರ ಬಗ್ಗೆ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಸೈಜುವಿನ ವಾಟ್ಸ್​ಆ್ಯಪ್​ ಚಾಟ್ಸ್​ ಮತ್ತು ಫೋನ್​ ಕಾಲ್​ ರೆಕಾರ್ಡ್ಸ್​ಗಳನ್ನು ಕೂಡ ಪೊಲೀಸರು ಪರೀಕ್ಷಿಸುತ್ತಿದ್ದಾರೆ. ಇನ್ನು ಆರೋಪಿ ಸೈಜು ಮಾಡೆಲ್​ಗಳ ಕಾರನ್ನು ಚೇಸ್ ಮಾಡಿರುವುದು ಕೂಡ ದುರುದ್ದೇಶದಿಂದ ಎಂಬ ಅಂಶ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದೆ.

    ಆರೋಪಿ ಸೈಜು ಬೆದರಿಕೆಯ ಧ್ವನಿಯಲ್ಲಿ ಮಾಡೆಲ್‌ಗಳಿಗೆ ರಾತ್ರಿ ವೇಳೆ ತನ್ನ ಮನೆ ಅಥವಾ ಹೋಟೆಲ್‌ನಲ್ಲಿ ಉಳಿದುಕೊಂಡು ಮರುದಿನ ಬೆಳಗ್ಗೆ ತಮ್ಮ ಮನೆಗಳಿಗೆ ಪ್ರಯಾಣ ಮುಂದುವರಿಸುವಂತೆ ಹೇಳಿದ್ದ ಎಂದು ಪೊಲೀಸರಿಗೆ ವಿಚಾರಣೆ ವೇಳೆ ದೃಢಪಟ್ಟಿದೆ. ಅವನ ಹಿಡಿತದಿಂದ ಪಾರಾಗಲು ಯುವತಿಯರು ಹೋಟೆಲ್​ನಿಂದ ಹೋಗುವಾಗ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ.

    ಮಾಡೆಲ್‌ಗಳ ಕಾರನ್ನು ಹಿಂಬಾಲಿಸಲು ಸೈಜು ಬಳಸುತ್ತಿದ್ದ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಡಿಜೆ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಬಳಸುವ ಸ್ಪೀಕರ್ ಮತ್ತು ಆಲ್ಕೋಹಾಲ್ ಅಳತೆಯ ಕಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್​ಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

    ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲೀಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದಾರೆ. ರಾಯ್​ ಮತ್ತು ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್​ನಿಂದ ಹೊರಟ ಮಾಡೆಲ್​ಗಳು ಮತ್ತು ಕಾರಿನ ಚಾಲಕ ಅಬ್ದುಲ್​ ರೆಹಮಾನ್​ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಮತ್ತು ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ. ಅಲ್ಲದೆ, ಆತ ದುರುದ್ದೇಶ ಹೊಂದಿದ್ದ ಎಂಬುದು ಕೂಡ ಇದೀಗ ತಿಳಿದುಬಂದಿದೆ. ಪ್ರಕರಣ ಇನ್ನುಷ್ಟು ನಿಗೂಢವಾಗುತ್ತಿದೆ. ಸದ್ಯ ತನಿಖೆ ಮುಂದುವರಿದಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿಯಲ್ಲಿ ಡ್ರಗ್ಸ್​ ಅಮಲು, ಖಾಸಗಿ ವಿಡಿಯೋ ಬೆನ್ನತ್ತ ಪೊಲೀಸರು!

    ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿ ನಡೆದ ಹೋಟೆಲ್​ ಮಾಲೀಕನ ದುಷ್ಕೃತ್ಯ ಬಿಚ್ಚಿಟ್ಟ ಸಿಬ್ಬಂದಿ!

    ಮಾಡೆಲ್​ಗಳಿಬ್ಬರ ದುರ್ಮರಣ: ಪಾರ್ಟಿ ನಡೆದ ಹೋಟೆಲ್​ ಮಾಲೀಕ ಮಾಡಿದ ಈ ಕೃತ್ಯದಿಂದ ಸಂಶಯ ದುಪ್ಪಟ್ಟು!

    ಮಾಡೆಲ್​ಗಳಿಬ್ಬರ ದುರ್ಮರಣ: ಕೇಸ್​ ಕ್ಲೋಸ್​ ಆಯ್ತು ಅನ್ನುವಷ್ಟರಲ್ಲಿ ಪ್ರಕರಣಕ್ಕೆ ಹೊಸ ತಿರುವು!

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts