ಅನುಮತಿಯಿಲ್ಲದೇ ಮೊಬೈಲ್​ ಖರೀದಿಸಿದ ಪತ್ನಿಯನ್ನು ಕೊಲ್ಲಲು ಗಂಡನ ಸುಪಾರಿ: ಆದ್ರೆ ಆಗಿದ್ದೇ ಬೇರೆ

Woman
Published on

ಕೋಲ್ಕತ: ಅನುಮತಿ ಇಲ್ಲದೇ ಸ್ಮಾರ್ಟ್​ಫೋನ್​ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಲು ಗಂಡನೊಬ್ಬ ಸುಪಾರಿ ಕೊಟ್ಟ ಪ್ರಕರಣ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಪೊಲೀಸರು ಗಂಡ ಸೇರಿದಂತೆ ಇಬ್ಬರು ಆರೋಪಿಗಳನ್ನು ಅನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಹಿಳೆಯ ಮೇಲೆ ಹರಿತ ಆಯುಧದಿಂದ ದಾಳಿ ನಡೆದಿದ್ದು, ಹೇಗೋ ಬದುಕುಳಿದಿರುವ ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿದ್ದು, ಗಾಯಕ್ಕೆ ಏಲು ಹೊಲಿಗೆಗಳನ್ನು ಹಾಕಲಾಗಿದೆ.

ವಿವರಣೆಗೆ ಬರುವುದಾದರೆ, ಕೋಲ್ಕತದ ದಕ್ಷಿಣ ಭಾಗದಲ್ಲಿರುವ ನರೇಂದ್ರಪುರ್​ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಮಾರ್ಟ್​ ಫೋನ್​ ತೆಗೆದುಕೊಡುವಂತೆ ಕೆಲವು ತಿಂಗಳ ಹಿಂದೆ ಪತ್ನಿ ಗಂಡನ ಬಳಿ ಕೇಳಿಕೊಂಡಿದ್ದಳು. ಆದರೆ, ಗಂಡ ನಿರಾಕರಿಸಿದ್ದ. ಆದರೆ, ಮಕ್ಕಳಿಗೆ ಟ್ಯೂಷನ್​ ಹೇಳಿಕೊಟ್ಟು ಸಂಪಾದಿಸಿದ ಹಣದಲ್ಲಿ ಜನವರಿ 1ರಂದು ಮಹಿಳೆ ಸ್ಮಾರ್ಟ್​ಫೋನ್​ ಖರೀದಿಸಿದ್ದಳು. ಈ ವಿಚಾರ ಗಂಡನ ಗಮನಕ್ಕೆ ಬಂದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಕಳೆದ ಗುರುವಾರ ರಾತ್ರಿ ಸಂತ್ರಸ್ತೆ ಮಲಗಲು ಹೋಗಿದ್ದಾಳೆ. ಬಳಿಕ ಆಕೆಯ ಪತಿ ಮುಖ್ಯದ್ವಾರವನ್ನು ಲಾಕ್​ ಮಾಡಿಕೊಂಡು ಹೊರ ಹೋಗಿದ್ದಾರೆ. ತುಂಬಾ ಹೊತ್ತಾದರೂ ಬರದಿದ್ದಾಗ. ಆತನನ್ನು ಹುಡುಕಿಕೊಂಡು ಸಂತ್ರಸ್ತೆ ಹೊರಗಡೆ ಬಂದಾಗ ಆಕೆಯ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಬಳಿಕ ಅವರಿಂದ ತಪ್ಪಿಸಿಕೊಂಡು ವಾಪಸ್ಸು ಮನೆಗೆ ಬಂದು ಸಂತ್ರಸ್ತೆ ಕೂಗಿಕೊಂಡಾಗ ಅದನ್ನು ಕೇಳಿ ಸ್ಥಳೀಯರು ಎದ್ದು ಬಂದಿದ್ದಾರೆ. ಈ ವೇಳೆ ಓರ್ವ ಆರೋಪಿ ಮತ್ತು ಆಕೆಯ ಗಂಡನ್ನು ಜನರು ಹಿಡಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಎಸ್ಕೇಪ್​ ಆಗಿದ್ದಾನೆ.

ಸಂತ್ರಸ್ತೆಯ ಗಂಡನ ಹೆಸರು ರಾಜೇಶ್​ ಜಾ (40) ಇನ್ನೊಬ್ಬ ಆರೋಪಿಯನ್ನು ಸುರಜಿತ್​ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ದಂಪತಿಗೆ 11 ಮತ್ತು 5 ವರ್ಷ ವಯಸ್ಸಿನ ಇಬ್ಬರು ಶಾಲೆಗೆ ಹೋಗುವ ಹೆಣ್ಣು ಮಕ್ಕಳಿದ್ದಾರೆ. ಪತಿ ಮೊಬೈಲ್ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಬಿಕಾಂ ಪದವಿ ಪಡೆದಿರುವ ಮಹಿಳೆ ಸ್ವಂತ ಹಣ ಸಂಪಾದಿಸಲು ಮನೆಯಲ್ಲಿ ಟ್ಯೂಷನ್ ಹೇಳುತ್ತಿದ್ದರು. ಇದೀಗ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net