

ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು ಕೇವಲ ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ ಅನೇಕ ಆಟಗಾರರಿಗೂ ಬೇಸರವಾಗಿದೆ. ಅದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಕೂಡ ಒಬ್ಬರು. ಇದೀಗ ಕೊಹ್ಲಿ ಮದುವೆ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಅಖ್ತರ್ ವಿವಾದದ ಸುಳಿಗೆ ಸಿಲುಕಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆಗಿನ ಮದುವೆಯೇ ಅವರ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬ ರೀತಿಯಲ್ಲಿ ಅಖ್ತರ್ ಮಾತನಾಡಿದ್ದಾರೆ. ಸ್ಟಾರ್ ಕ್ರಿಕೆಟಿಗ ಕೊಹ್ಲಿ ಮದುವೆಯಾಗಬಾರದಿತ್ತು ಮತ್ತು 10 ರಿಂದ 12 ವರ್ಷಗಳ ಕಾಲ ಆಟದ ಮೇಲೆ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.
ಅಖ್ತರ್ ಅವರ ಈ ಹೇಳಿಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಖ್ತರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಮೂರ್ಖತನದ ಹೇಳಿಕೆ ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ನಿಜಕ್ಕೂ ಇದೊಂದು ನಾಚಿಕೆಗೇಡಿನ ಹೇಳಿಕೆ ಎಂದು ಮತ್ತೊಬ್ಬ ನೆಟ್ಟಿಗ ಜರಿದಿದ್ದಾರೆ.
ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮೂಲಕ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಖ್ತರ್ ವಿರುದ್ಧ ಆರೋಪ ಮಾಡಿದ್ದಾರೆ.
ಕೊಹ್ಲಿ, ಟೆಸ್ಟ್ ನಾಯಕತ್ವಕ್ಕೂ ಗುಡ್ಬೈ ಹೇಳಿದ ನಿರ್ಧಾರದ ಬಗ್ಗೆ ದೈನಿಕ್ ಜಾಗರಣ ಮಾಧ್ಯಮದ ಜತೆ ಮಾತನಾಡಿದ ಅಖ್ತರ್, ಅವರ (ಕೊಹ್ಲಿ) ಜಾಗದಲ್ಲಿ ನಾನಿದ್ದರೆ ಮದುವೆಯಾಗುತ್ತಿರಲಿಲ್ಲ. ನಾನು ರನ್ ಗಳಿಸಿ ಕ್ರಿಕೆಟ್ ಎಂಜಾಯ್ ಮಾಡುತ್ತಿದೆ. ಈ 10 ರಿಂದ 12 ವರ್ಷಗಳ ಕ್ರಿಕೆಟ್ ಸಮಯ ಮತ್ತೆ ಬರುವುದಿಲ್ಲ. ಮದುವೆಯಾಗುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ನೀವು ಭಾರತಕ್ಕಾಗಿ ಆಡುತ್ತಿದ್ದರೆ, ನೀವು ಸಮಯವನ್ನು ಸ್ವಲ್ಪ ಆನಂದಿಸಬೇಕು ಎಂದಿದ್ದರು.
ಮಕ್ಕಳಿಂದ, ಕುಟುಂಬದವರಿಂದ ಒತ್ತಡವಿರುತ್ತದೆ. ಜವಾಬ್ದಾರಿ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತದೆ. ಕ್ರಿಕೆಟಿಗರು 14-15 ವರ್ಷಗಳ ಅಲ್ಪಾವಧಿಯ ವೃತ್ತಿಜೀವನವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಐದು ರಿಂದ ಆರು ವರ್ಷಗಳ ಕಾಲ ಉತ್ತುಂಗದಲ್ಲಿರುತ್ತಾರೆ. ವಿರಾಟ್ ಅವರ ಆ ವರ್ಷಗಳು ಕಳೆದಿವೆ, ಈಗ ಅವರು ಕಷ್ಟಪಡಬೇಕಾಗಿದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವು 1-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡ ಒಂದು ದಿನದ ನಂತರ ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದರು. (ಏಜೆನ್ಸೀಸ್)