More

    ಸಮಾಜಸೇವೆ ಚುನಾವಣಾ ಗಿಮಿಕ್‌ ಅಲ್ಲ ಎಂದಿದ್ದ ಸೋನು ಸೂದ್‌ ಮಾತು ತಪ್ಪಿದ್ರಾ? ‘ದೇವರು’ ಎಂದವರೇ ತಿರುಗಿಬಿದ್ದರು!

    ಮುಂಬೈ: ಎರಡು ವರ್ಷಗಳ ಹಿಂದೆ ಕರೊನಾ ಮಹಾಮಾರಿ ಜನರ ಜೀವನವನ್ನು ನುಚ್ಚುನೂರು ಮಾಡಿದ್ದ ಸಂದರ್ಭದಲ್ಲಿ ಅದೆಷ್ಟೋ ಮಂದಿಗೆ ನೆರವಾದವರು ನಟ ಸೋನು ಸೂದ್‌. ಅಲ್ಲಿಂದ ಈ ಎರಡು ವರ್ಷಗಳಲ್ಲಿ ಅವರು ಮಾಡಿರುವ ಸಮಾಜ ಕಾರ್ಯಗಳು ಅನೇಕ. ಕೆಲವೊಮ್ಮೆ ಅತಿ ಎನ್ನಿಸುವಷ್ಟರ ಮಟ್ಟಿಗೆ ಸೇವೆ ಮಾಡಿದ್ದೂ ಇದೆ. ಹಲವರಿಗೆ ಇದೇ ಕಾರಣಕ್ಕೆ ಇವರು ‘ದೇವರು’ ಎನಿಸಿಕೊಂಡದ್ದೂ ಇದೆ.

    ಇವರ ಈ ರೀತಿಯ ಸಮಾಜಸೇವೆ ಒಂದು ಹಂತವನ್ನು ದಾಟಿದ ಸಂದರ್ಭದಲ್ಲಿ ಹಾಗೂ ಅವರ ಕೆಲವೊಂದು ಹೇಳಿಕೆಗಳನ್ನು ಕಂಡಿದ್ದ ಅನೇಕ ಮಂದಿ ಇದು ಚುನಾವಣಾ ಗಿಮಿಕ್‌ ಎಂದು ವ್ಯಂಗ್ಯವಾಡಿದ್ದರು. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಿ, ಅಲ್ಲಿ ಜಯ ಗಳಿಸಲು ಇವರು ಸ್ಕೆಚ್‌ ಹಾಕುತ್ತಿದ್ದಾರೆ ಎಂದು ಮಾತನಾಡಿದವರೂ ಸಾಕಷ್ಟು ಮಂದಿ. ಆದರೆ ರಾಜಕೀಯ ನನಗೆ ದೂರ. ನನ್ನದು ಸಮಾಜಸೇವೆ ಮಾತ್ರ ಎಂದು ಹೇಳುವ ಮೂಲಕ ಸೋನು ಸೂದ್‌ ಎಲ್ಲರ ಬಾಯಿ ಮುಚ್ಚಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಸೋನು ಅಭಿಮಾನಿಗಳು ಹೀಗೆ ವ್ಯಂಗ್ಯವಾಡಿದವರ ವಿರುದ್ಧವೇ ತಿರುಗಿ ಬಿದ್ದಿದ್ದರು. ಅಷ್ಟೇ ಅಲ್ಲದೇ ಇವರಿಗೆ ಅತ್ಯುನ್ನತ ಪ್ರಶಸ್ತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದವರೂ ಹಲವರು.

    ಇವೆಲ್ಲಾ ಇನ್ನೂ ಚರ್ಚೆಯಲ್ಲಿ ಇರುವಾಗಲೇ ಇದೀಗ ಸೋನು ಸೂದ್‌ ಸಹೋದರಿ ಮಾಳವಿಕಾ ಸೂದ್​ ಅವರು ಇತ್ತೀಚೆಗೆ ಪಂಜಾಬ್​ನಲ್ಲಿ ಕಾಂಗ್ರೆಸ್​ ಸೇರಿದ್ದರು. ಇವರು ಹೀಗೆ ಮಾಡುತ್ತಲೇ ಸೋನು ಸೂದ್‌ ಬಗ್ಗೆ ಹಲವಾರು ಮಂದಿಗೆ ಸಂದೇಹ ಶುರುವಾಗಿತ್ತು. ಅದಕ್ಕೆ ಮಾಧ್ಯಮಗಳವರು ಪ್ರಶ್ನೆ ಕೇಳಿದಾಗಲೆಲ್ಲಾ ಸೋನು ಸೂದ್‌, ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಳವಿಕಾ ಸ್ಪರ್ಧಿಸುತ್ತಿದ್ದಾರೆ. ಆದರೆ ನನ್ನದೇನಿದ್ದರೂ ಸಮಾಜಸೇವೆಯಷ್ಟೇ. ನಾನು ಮಾಡಿದ್ದು ಸಮಾಜಕ್ಕಾಗಿ ಮಾತ್ರ. ಚುನಾವಣೆಗೂ ನನಗೂ ಸಂಬಂಧವಿಲ್ಲ. ತಂಗಿಯ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು.

    ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​

    ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ತಂಗಿಯ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಜನರಿಂದ ಮತಯಾಚನೆ ಮಾಡುತ್ತಿದ್ದಾರೆ. ‘ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನನ್ನ ತಂಗಿ ಬಗ್ಗೆ ನನಗೆ ಹೆಮ್ಮೆ ಇದೆ. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಾಡುತ್ತಿರುವ ಕೆಲಸವನ್ನು ಮುಂದುವರಿಸುತ್ತೇನೆ’ ಎಂದಿದ್ದ ನಟ ಇದೀಗ ಭರ್ಜರಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹುಟ್ಟೂರಾದ ಮೊಗಾ ಕ್ಷೇತ್ರದಿಂದ ಮಾಳವಿಕಾ ಸ್ಪರ್ಧೆಗೆ ಇಳಿದಿದ್ದರೆ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

    ಇತ್ತೀಚೆಗೆ ಮಾಳವಿಕಾ ಸೂದ್​ ಜತೆ ಸೇರಿ ಸೋನು ಸೂದ್ ಮೊಗಾದಲ್ಲಿರುವ ಸಾವಿರ ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್​ಗಳನ್ನು ನೀಡಿದ್ದರು. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಲಿದೆ ಎಂದು ಅವರು ಹೇಳಿದ್ದರು. ಇದು ಕೂಡ ಚುನಾವಣಾ ದೃಷ್ಟಿಯಿಂದ ನೀಡಿರುವುದು ಎಂದು ಕೆಲವರು ಟೀಕಿಸುತ್ತಿದ್ದಾರೆ. ದೇವರು ಎಂದು ಹಿಂದೊಮ್ಮೆ ಕೊಂಡಾಡಿದವರೇ ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಇಷ್ಟು ದಿನ ನಿಮ್ಮ ದೂರದ ಉದ್ದೇಶದ ಬಗ್ಗೆ ಮಾತನಾಡಿದವರ ವಿರೋಧವನ್ನು ನಾವು ಕಟ್ಟಿಕೊಂಡೆವು. ಆದರೆ ಅವರು ಹೇಳಿದ್ದೇ ನಿಜವಾಯ್ತು. ಸದ್ಯ ತಂಗಿಯನ್ನು ರಾಜಕೀಯಕ್ಕೆ ಇಳಿಸಿ, ನಂತರ ನಿಮ್ಮ ಎಂಟ್ರಿ ಸುಲಭ ಮಾಡಿಕೊಂಡಿರುವ ನಿಮ್ಮ ಉದ್ದೇಶ ಗೊತ್ತಾಗುತ್ತಿದೆ. ಸಮಾಜ ಸೇವೆಯ ಹೆಸರಿನಲ್ಲಿ ನೀವು ಮಾಡಿದ್ದ ಎಲ್ಲವೂ ಇದೀಗ ಬಹಿರಂಗಗೊಳ್ಳುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಕೆಲವರು ಮಾತ್ರ ರಾಜಕೀಯ ಮಾಡಿಕೊಳ್ಳಲಿ ಬಿಡಿ, ಸಮಾಜಸೇವೆಯಂತೂ ಮಾಡಿದ್ದು ನಿಜ, ನಮಗೆ ಅವರು ಎಂದಿಗೂ ದೇವರೇ ಎಂದು ಕಮೆಂಟ್‌ ಮಾಡಿದ್ದಾರೆ.

    ಪಂಜಾಬ್‌ ರಾಜಕೀಯದಲ್ಲಿ ಪಾಕ್‌ ಪ್ರವೇಶ: ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಸ್ಫೋಟಕ ಮಾಹಿತಿ- ಸೋನಿಯಾ ಮೌನ, ಪ್ರಿಯಾಂಕಾ ಗರಂ…

    ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿ: ಹೈಕೋರ್ಟ್‌ ತೀರ್ಪಿನ ಮೂಲಕ ಸಂಚಲನ ಸೃಷ್ಟಿಸಿದ್ದ ಜಡ್ಜ್‌ ಇದೀಗ ಸುಪ್ರೀಂ ನ್ಯಾಯಮೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts