ಅಭಿವೃದ್ಧಿ ಹರಿಕಾರ ಆರ್.ಸಂಪತ್​ರಾಜ್; ಜನಪ್ರಿಯ ಯೋಜನೆಗಳ ರೂವಾರಿ

Sampath Raj
Published on

ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳ ಮೂಲಕ ಹಂತ ಹಂತವಾಗಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೀರ್ತಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್​ರಾಜ್ ಅವರಿಗೆ ಸಲ್ಲುತ್ತದೆ. ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವೇಳೆ, ಕಾಂಗ್ರೆಸ್​ನ ದಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್​ಎಸ್​ಯುುಐ) ಸೇರಿಕೊಂಡರು. ಆ ಸಂದರ್ಭದಲ್ಲಿ ಚುರುಕುತನ, ನಾಯಕತ್ವ ಗುಣ ಮತ್ತು ಪ್ರತಿಭೆ ಮೂಲಕ ಸಂಪತ್​ರಾಜ್​ರನ್ನು ಡಿ.ಕೆ.ಶಿವಕುಮಾರ್ ಗುರುತಿಸಿದರು. ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು.

ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್​ನವರಾದ ಸಂಪತ್​ರಾಜ್, ತಂದೆ ಸಿ. ರಾಜೀ ಸ್ವಾತಂತ್ರ್ಯ ಹೋರಾಟಗಾರರು. ಕೆಜಿಎಫ್ ಟೌನ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿದ್ದವರು. ಬೆಂಗಳೂರಿಗೆ ವಲಸೆ ಬಂದ ಬಳಿಕ ಹಲವು ವಿದ್ಯಾಸಂಸ್ಥೆಗಳನ್ನು ರಾಜೀ ಆರಂಭಿಸಿದ್ದರು. ಮಾಜಿ ಸಿಎಂ ನಿಜಲಿಂಗಪ್ಪ ಜತೆ ಒಡನಾಟ ಹೊಂದಿದವರು. ತಂದೆ ರಾಜಕೀಯ ಹಿನ್ನೆಲೆ ಹೊಂದಿದ್ದರಿಂದ ಸಂಪತ್​ರಾಜ್ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ವಾರ್ಡ್​ನಿಂದ ಸ್ಪರ್ಧಿಸಿ ಕಾಪೋರೇಟರ್ ಆಗಿ ಆಯ್ಕೆಯಾದರು. 2 ಬಾರಿ ಕಾಪೋರೇಟರ್ ಆದ ಸಂಪತ್​ರಾಜ್, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಸಹಕಾರದೊಂದಿಗೆ ರಾಜಧಾನಿಯ 51ನೇ ಮೇಯರ್ ಆದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್ ಹಾಗೂ ಮಾಜಿ ಸಂಸದ ಬಿ.ಕೆ.ಹರಿಪ್ರಸಾದ್ ಅವರ ಪ್ರೋತ್ಸಾಹ ಸಿಕ್ಕಿತ್ತು. 2017ರಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಹಾಗೂ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೇಯರ್ ಆಗಿದ್ದ ಇವರಿಗೆ, ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟ ಕೀರ್ತಿ ಸಲ್ಲುತ್ತದೆ.

ಜನಪ್ರಿಯ ಯೋಜನೆಗಳ ವಿವರ: ಮೇಯರ್ ಆಗಿದ್ದ ಅವಧಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಬೆಂಗಳೂರಿಗೆ ನೂತನ ಸ್ಪರ್ಶ ಕೊಟ್ಟಿರುವ ಖ್ಯಾತಿ ಸಂಪತ್​ರಾಜ್​ಗೆ ಸಲ್ಲುತ್ತದೆ. ‘ವಾಯುಮಾಲಿನ್ಯ ತಡೆಗೆ’ ವಿಶ್ವಮಟ್ಟದ ಒಪ್ಪಂದ ಮಾಡಿಕೊಂಡಿದ್ದರು. ವಿಶ್ವದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ಲಂಡನ್​ಗೆ ಭೇಟಿ ನೀಡಿ ಅಲ್ಲಿನ ಮೇಯರ್ ಸಾದಿಕ್ ಖಾನ್ ಅವರೊಂದಿಗೆ ಸಮಾಲೋಚಿಸಿ ಪರಸ್ಪರ ಒಪ್ಪಂದ ಮಾಡಿಕೊಂಡರು. ಸಿಲಿಕಾನ್ ಸಿಟಿಯಲ್ಲಿ ಕಸದ ರಾಶಿ ಬಿದ್ದಿರುವ ಬ್ಲಾಕ್ ಸ್ಪಾಟ್​ಗಳು ಬಿಬಿಎಂಪಿಗೆ ತಲೆನೋವಾಗಿತ್ತು. ಇದರ ನಿವಾರಣೆಗೆ ‘ಬ್ಲಾಕ್ ಸ್ಪಾಟ್’ ತಡೆಗೆ ಕ್ರಮ ಕೈಗೊಂಡ ಸಂಪತ್​ರಾಜ್, ಬೆಂಗಳೂರಿನ 200 ಸ್ಥಳಗಳಲ್ಲಿ ಟ್ರಾನ್ಪರ್ ಸ್ಟೇಷನ್​ಗಳನ್ನು ಸ್ಥಾಪಿಸಿದ್ದರು. ರಸ್ತೆ ಗುಂಡಿಮುಕ್ತ ನಗರಕ್ಕಾಗಿ ಮೊದಲ ಬಾರಿಗೆ ‘ವೈಟ್ ಟಾಪಿಂಗ್ ರಸ್ತೆ’ ನಿರ್ಮಾಣ ಯೋಜನೆಗೆ ಚಾಲನೆ ನೀಡಿದವರು. 25 ವರ್ಷ ಬಾಳಿಕೆ ಬರುವ ಮತ್ತು ವಾಹನಗಳ ಸುಗಮ ಸಂಚಾರ ವೇಳೆ ಶೇ.14 ಇಂಧನ ಉಳಿತಾಯ ಆಗುವಂತೆ ನಯವಾದ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ವಿುಸಲಾಯಿತು. 641 ಕೋಟಿ ರೂ. ವೆಚ್ಚದಲ್ಲಿ ನಗರದ 42 ರಸ್ತೆಗಳಲ್ಲಿ ವೈಟ್ ಟಾಪಿಂಗ್ ರಸ್ತೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಬಹುಮಹಡಿ ರ್ಪಾಂಗ್ ವ್ಯವಸ್ಥೆ ಯೋಜನೆ ಇವರ ಅವಧಿಯಲ್ಲಿ ನಡೆದಿತ್ತು. ನಗರದ ಶೇಷಾದ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನ ಹಿಂಭಾಗದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ವಾಹನಗಳ ನಿಲುಗಡೆಗೆ ರ್ಪಾಂಗ್ ನಿರ್ವಿುಸುವ ಯೋಜನೆಗೆ ಚಾಲನೆ ಕೊಟ್ಟರು. ಬೈಕ್ ಮತ್ತು ಕಾರು ಸೇರಿ ಅಂದಾಜು ಸಾವಿರಕ್ಕೂ ಅಧಿಕ ವಾಹನಗಳ ನಿಲುಗಡೆ ವ್ಯವಸ್ಥೆ ಇದೆ. ಬಿಬಿಎಂಪಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ರ್ಪಾಂಗ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಹೆಗ್ಗಳಿಕೆ ಸಂಪತ್​ರಾಜ್​ಗೆ ಸೇರುತ್ತದೆ. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ದಿನೇಶ್ ಗುಂಡೂರಾವ್​ಗೆ ಇದರ ಶ್ರೇಯಸ್ಸು ಸಲ್ಲುತ್ತದೆ.

ಚರ್ಚ್ ಸ್ಟ್ರೀಟ್ ವಿಶೇಷ ನಿರ್ವಹಣೆ: ಸಂಪತ್​ರಾಜ್ ಅವರು ಮೇಯರ್ ಆಗಿದ್ದ ವೇಳೆ ಮೊದಲ ಬಾರಿಗೆ ಚರ್ಚ್ ಸ್ಟ್ರೀಟ್ ನಿರ್ವಹಣೆಗೆ ಯೋಜನೆ ರೂಪಿಸಿದರು. ರಸ್ತೆ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದರು. ದಿನಕ್ಕೆ ಎರಡು ಬಾರಿ ಈ ರಸ್ತೆಯನ್ನು ಗುಡಿಸಿ ಕಸ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಯಿತು. ರಸ್ತೆ ಸುತ್ತಮುತ್ತ ಬರುವ ಬೀದಿದೀಪ ಸೇರಿ ಇತರ ನಿರ್ವಹಣೆಯನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಅಳವಡಿಸುವ ಜಾಹೀರಾತು ಫಲಕ ತೆಗೆದು ಹಾಕಿ ಅನುಮತಿ ಪಡೆದ ಜಾಹೀರಾತು ಅಳವಡಿಸಲಾಗಿತ್ತು. ಇದರಿಂದಾಗಿ ಪಾಲಿಕೆಗೂ ಆದಾಯ ಬರುತ್ತಿದೆ. ಈ ವಿನೂತನ ವ್ಯವಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಾಕ್ತವಾಯಿತು. ಅಂದಿನಿಂದ ಇಂದಿನವರೆಗೆ ಚರ್ಚ್ ಸ್ಟ್ರೀಟ್ ರಸ್ತೆ ಸ್ವಚ್ಛತೆಗೆ ಹೆಸರುವಾಸಿಯಾಗಿದೆ.

Sampath Ex

ಡಿಜೆ ಹಳ್ಳಿ ವಾರ್ಡ್ ಅಭಿವೃದ್ಧಿ ಶ್ರಮ: ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಜತೆಗೆ ತಮ್ಮ ಡಿಜೆ ಹಳ್ಳಿ ವಾರ್ಡ್​ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಂಪತ್​ರಾಜ್ ಕೈಗೊಂಡಿದ್ದಾರೆ. ಕಾಪೋರೇಟರ್ ಹಾಗೂ ಮೇಯರ್ ಆಗಿದ್ದ ವೇಳೆ ನೂರಾರು ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಅಭಿವೃದ್ಧಿ ಮಾಡಿದ್ದಾರೆ. ಕುಡಿಯುವ ನೀರು ಸಮಸ್ಯೆ ಬಗೆಹರಿಸಲು 55 ಬೋರ್​ವೆಲ್ ಕೊರೆಸಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯುದ ಫಲಾನುಭವಿಗಳಿಗೆ 500ಕ್ಕೂ ಅಧಿಕ ಮನೆಗಳ ನಿರ್ಮಾಣ ಮಾಡಿದ್ದಾರೆ. ವಾರ್ಡ್​ನಲ್ಲಿ ಶೇ.80 ರಸ್ತೆಗಳು ಹಾಗೂ ಒಳಚರಂಡಿ ಅಭಿವೃದ್ಧಿ, ಶೇ.90 ಬೋರ್​ವೆಲ್ ಪೈಪ್​ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ದೊಡ್ಡಣ್ಣ ನಗರದ ‘ಇ’ ಬ್ಲಾಕ್​ನಲ್ಲಿರುವ ಹುಸೇನಿಯಾ ಮಸೀದಿ ಹಾಗೂ ಸುಜ್ಜನ ನಗರದಿಂದ ಎನ್​ಪಿ ಫ್ಯಾಕ್ಟರಿ ಸಂಪರ್ಕ ನೀಡುವ ಎರಡು ಪ್ರಮುಖ ಒಳಚರಂಡಿ ಕಾಮಗಾರಿ ಮುಗಿಸಿದ್ದರು. ಶ್ರೀನಿವಾಸನಗರ ಮತ್ತು ಬಂಗಾರಿಗಿರಿ ಲೇಔಟ್​ನಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ದೊಡ್ಡಣ್ಣನಗರ ‘ಇ’ ಬ್ಲಾಕ್​ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದಾರೆ.

ಫಿಕ್ಸ್ ಮೈ ಸ್ಟ್ರೀಟ್ ಆಪ್​ಗೆ ಚಾಲನೆ: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುವ ಉದ್ದೇಶದಿಂದ ಸಂಪತ್​ರಾಜ್, ‘ಫಿಕ್ಸ್ ಮೈ ಸ್ಟ್ರೀಟ್ ಆಪ್’ಗೆ ಚಾಲನೆ ನೀಡಿದ್ದರು. ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳು ಮತ್ತು ಗುಣಮಟ್ಟವಲ್ಲದ ರಸ್ತೆಗಳ ಭಾವಚಿತ್ರ ತೆಗೆದು ಆಪ್​ನಲ್ಲಿ ಹಾಕಿದ್ದರೆ ವಾರ್ಡ್ ಮಟ್ಟದ ಇಂಜಿನಿಯರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಬಳಿಕ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಲು ನೆರವಾಗಲಿದೆ. ಸಮಸ್ಯೆ ನಿವಾರಣೆಯಾದ ಬಳಿಕ ದೂರದಾರರ ಮೊಬೈಲ್​ಗೆ ಚಿತ್ರಸಮೇತ ಸಂದೇಶ ರವಾನೆಯಾಗಲಿದೆ. ಇದರಿಂದಾಗಿ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಈ ಆಪ್ ನೆರವಾಗಲಿದೆ. ಆ ಮೂಲಕ ಸಾವಿರಾರು ರಸ್ತೆಗುಂಡಿಗಳನ್ನು ಪಾಲಿಕೆ ಮುಚ್ಚಿದೆ.

ಮಹಾನಗರದಲ್ಲಿ ಪ್ರವಾಹ ತಡೆಗೆ ದಿಟ್ಟ ಕ್ರಮ: ಸಂಪತ್​ರಾಜ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ವೇಳೆ ರಾಜಧಾನಿಯಲ್ಲಿ ಪ್ರವಾಹ ಉಂಟಾಗಿತ್ತು. ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಪ್ರವಾಹದಿಂದಾಗಿ 5 ಮಂದಿ ಸಾವನ್ನಪ್ಪಿದ್ದರು. ಮಳೆಗಾದಲ್ಲಿ ಅಪಾಯ ತಂದೊಡ್ಡುವ ರಾಜಕಾಲುವೆ ನಿರ್ವಹಣೆಗೆ, ಒತ್ತುವರಿಗೆ ತೆರವಿಗೆ ಆದ್ಯತೆ ನೀಡಿದರು. ಬೆಂಗಳೂರಿನ ರಾಜಕಾಲುವೆಗಳ ಬಗ್ಗೆ ಕಂದಾಯ ಇಲಾಖೆ ನಡೆಸಿರುವ ಸಮೀಕ್ಷೆ ಆಧರಿಸಿ ಒತ್ತುವರಿ ತೆರವಿಗೆ ದಿಟ್ಟ ಕ್ರಮ ಕೈಗೊಂಡರು. ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆ ಪೈಕಿ 177 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗಗಳ ಪುನರ್ ನಿರ್ವಹಣೆ, ಅಭಿವೃದ್ಧಿ ಮಾಡಿದ್ದರು. ಈ ಅವಧಿಯಲ್ಲಿ 1,367 ಕೋಟಿ ರೂ. ವೆಚ್ಚದಲ್ಲಿ 192 ಕಿ.ಮೀ. ಉದ್ದದಷ್ಟು ರಾಜಕಾಲುವೆ ಅಭಿವೃದ್ಧಿ ಕಾರ್ಯಗಳು ನಡೆದಿವೆ.

Ex mayor Sampath

ನೇರ ವೇತನ ವ್ಯವಸ್ಥೆ: ಪಾಲಿಕೆಯಲ್ಲಿ ಅಂದಾಜು 16 ಸಾವಿರಕ್ಕೂ ಅಧಿಕ ಪೌರಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಆದರೆ ಅನೇಕ ವರ್ಷಗಳಿಂದ ಸಕಾಲದಲ್ಲಿ ವೇತನ ಸಿಗದೆ ಪರದಾಡುವಂತಾಗಿತ್ತು. ಇದನ್ನು ಮನಗಂಡು ಪೌರಕಾರ್ವಿುಕರ ಖಾತೆಗೆ ನೇರವಾಗಿ ವೇತನ ಹಾಕುವ ವ್ಯವಸ್ಥೆಯನ್ನು ಮೇಯರ್ ಆಗಿದ್ದ ವೇಳೆ ಸಂಪತ್​ರಾಜ್ ಜಾರಿಗೆ ತಂದರು. ಜತೆಗೆ, ಬಯೋಮೆಟ್ರಿಕ್ ವ್ಯವಸ್ಥೆಯನ್ನೂ ಕಡ್ಡಾಯಗೊಳಿಸಿದ್ದರು. ಇದರಿಂದಾಗಿ ಪ್ರತಿ ನಿತ್ಯ ಬೆಳಗ್ಗೆ ಪೌರಕಾರ್ವಿುಕರು ಬಯೋಮೆಟ್ರಿಕ್ ಒತ್ತಿ ಕೆಲಸಕ್ಕೆ ಹಾಜರಾಗುವಂತಾಯಿತು.

ಪಿಂಕ್ ಬೇಬಿ ಯೋಜನೆ: ವರ್ಷದ ಮೊದಲ ದಿನ ಅಂದರೆ ಜ.1ರಂದು ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಡುವ ಪಿಂಕ್ ಬೇಬಿ ಯೋಜನೆಯನ್ನು ಸಂಪತ್​ರಾಜ್ ಆರಂಭಿಸಿದರು. ಪಾಲಿಕೆಯಿಂದ 5 ಲಕ್ಷ ರೂ. ಠೇವಣಿ ಇರಿಸಲಾಗುತ್ತದೆ. ಇದರಿಂದ ಬರುವ ಹಣದಲ್ಲಿ ಮಗುವಿನ ಶಿಕ್ಷಣಕ್ಕೆ ಭರಿಸಬಹುದು. ಈ ಮೂಲಕ ಸಮಾಜಕ್ಕೆ ಮಾರಕವಾಗಿರುವ ಹೆಣ್ಣು ಭ್ರೂ ಹತ್ಯೆಯಂಥ ಪಿಡುಗು ನಿವಾರಿಸಿದರು. ಅಲ್ಲದೆ, ಮಹಿಳಾ ಚಾಲಕರಿಗೆ ನಿಲ್ದಾಣ ಮೀಸಲಿಡಲು ಪಿಂಕ್ ರ್ಪಾಂಗ್ ಅನುಷ್ಠಾನಕ್ಕೆ ತಂದ ಹೆಗ್ಗಳಿಕೆಯೂ ಇವರದೇ.

ಯೋಧರಂತೆ ಕೋವಿಡ್ ನಿರ್ವಹಣೆ: ಕೋವಿಡ್ ಸಂದರ್ಭದಲ್ಲಿ ವಾರ್ಡ್ ನಿವಾಸಿಗಳ ಕಷ್ಟಕ್ಕೆ ಸಂಪತ್​ರಾಜ್ ಸ್ಪಂದಿಸಿ, 2 ಕೋಟಿ ರೂ. ಮೌಲ್ಯದ ಫುಡ್ ಕಿಟ್​ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಹಜ್ ಭವನದಲ್ಲಿ ಕ್ಯಾಂಟೀನ್ ಸ್ಥಾಪಿಸಿ ಉಚಿತವಾಗಿ ಆಹಾರ ಪೊಟ್ಟಣಗಳನ್ನು ವಿತರಿಸಿದ್ದರು. ಇವರ ಸ್ನೇಹಿತ ಸಯ್ಯದ್ ರಿಯಾಲತ್ (ಥಪು) ಸಂಪತ್​ರಾಜ್​ಗೆ ಸಾಥ್ ನೀಡಿ ಕೋವಿಡ್ ತಡೆಯಲು ಪ್ರಮುಖ ಪಾತ್ರ ವಹಿಸಿದ್ದರು. ಸಂಘಟನೆ ಸ್ಥಾಪಿಸಿ ಕಾರ್ಯಕರ್ತರನ್ನು ಕಟ್ಟಿಕೊಂಡು ಎರಡು ಸಾವಿರಕ್ಕೂ ಅಧಿಕ ಅನಾಥ ಸಾವುಗಳನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೋವಿಡ್ ತಡೆಗೆ ಸಯ್ಯದ್ ರಿಯಾಲತ್ ಮುಂದಾಳತ್ವ ವಹಿಸಿದ್ದರು. ಸಂಪತ್​ರಾಜ್ ಸಹಕಾರದಿಂದಲೇ ಕೋವಿಡ್ ನಿರ್ವಹಣೆ ಮಾಡಲು ಸಹಾಯವಾಗಿತ್ತು. ಪ್ರತಿ ಹಂತದಲ್ಲೂ ನಮಗೆ ಸಹಾಯಕೊಟ್ಟಿದ್ದಾರೆ. ಕೋವಿಡ್​ನಿಂದ ಕಷ್ಟಗೆ ಸಿಲುಕಿದ್ದ ಸಾವಿರಾರು ಜನರಗಳಿಗೆ ಫುಡ್ ಕಿಟ್ ಸೇರಿ ಆರ್ಥಿಕ ಸಹಾಯ ಮಾಡಿದ್ದಾರೆ. ಅವರು ನನಗೆ ಗುರು ಇದ್ದಂತೆ ಎನ್ನುತ್ತಾರೆ ಸಯ್ಯದ್ ರಿಯಾಲತ್.

Ex mayor Sampath

ರಾಜಕೀಯದಲ್ಲಿ ಸಾಗಿ ಬಂದ ಹಾದಿ

  • ಎಂ.ಎಸ್. ರಾಮಯ್ಯ ತಾಂತ್ರಿಕ ವಿದ್ಯಾಸಂಸ್ಥೆಯ ಒಕ್ಕೂಟ ಅಧ್ಯಕ್ಷ
  • ಎನ್​ಎಸ್​ಯುುಐನ ತಾಂತ್ರಿಕ ಕೋಶದ ಉಪಾಧ್ಯಕ್ಷ
  • ಎಂಎಸ್​ಆರ್​ಐಟಿ ಕನ್ನಡ ಸಂಘದ ಅಧ್ಯಕ್ಷ
  • 1990ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಸಿ.ಕೆ.ಜಾಫರ್ ಷರೀಫ್ ಪರವಾಗಿ ಕೆಲಸ
  • 1994ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಬೈದುಲ್ಲಾ ಷರೀಫ್ ಪರ ಕೆಲಸ
  • 1999ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಸಿ.ಕೆ.ಜಾಫರ್ ಷರೀಫ್, ಜಯಮಹಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರೋಷನ್ ಬೇಗ್ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರವಾಗಿ ಚುನಾವಣೆಯಲ್ಲಿ ಕೆಲಸ
  • 2001ರಲ್ಲಿ ವಾರ್ಡ್ ಸಂಖ್ಯೆ 91ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿ ಎ.ಆರ್. ಝಾಕೀರ್ ಪರವಾಗಿ ಕಾರ್ಯ
  • 2004ರಲ್ಲಿಯೂ ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಆರ್. ರೋಷನ್ ಬೇಗ್, ಸಿ.ಕೆ.ಜಾಫರ್ ಷರೀಫ್, ದಿನೇಶ್ ಗುಂಡೂರಾವ್ ಪರವಾಗಿ ಕೆಲಸ
  • 2008ರಲ್ಲಿ ಪುಲಿಕೇಶಿನಗರ ಕ್ಷೇತ್ರದಲ್ಲಿ ಪ್ರಸನ್ನಕುಮಾರ್ ಶಾಸಕರಾಗಿ ಆಯ್ಕೆಯಾಗಲು ಕಾರ್ಯನಿರ್ವಹಣೆ
  • 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಕೆ.ಜಾಫರ್ ಷರೀಫ್ ಅವರಿಗೆ ಪುಲಿಕೇಶಿನಗರ ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಮತಗಳು ಲೀಡ್ ಬರಲು ಸಂಪತ್​ರಾಜ್ ಪಾತ್ರ ಮಹತ್ವದಾಗಿತ್ತು
  • 2010ರಲ್ಲಿ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾ ವಣೆಯಲ್ಲಿ ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ವಾರ್ಡ್​ನಿಂದ ಸ್ಪರ್ಧಿಸಿ ಅತ್ಯಧಿಕ ಮತಗಳನ್ನು ಪಡೆದು ಕಾಪೋರೇಟರ್ ಆಗಿ ಆಯ್ಕೆ
  • 2013ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪುಲಿಕೇಶಿನಗರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಬಿ. ಪ್ರಸನ್ನಕುಮಾರ್ ಪರ ಕೆಲಸ
  • 2014ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಿ.ನಾರಾಯಣಸ್ವಾಮಿ ಪರವಾಗಿ ಮತಯಾಚನೆ
  • 2015ರಲ್ಲಿ ಡಿ.ಜೆ.ಹಳ್ಳಿ ವಾರ್ಡ್​ನಲ್ಲಿ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಸಂಪತ್​ರಾಜ್ 7 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದರು
  • 2017-18ರಲ್ಲಿ ಬಿಬಿಎಂಪಿಯ 51ನೇ ಮೇಯರ್ ಆಯ್ಕೆ
  • 2023ರ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ. ರಾಮನ್ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತದಿಂದ ಸೋಲು
  • 2023ರಲ್ಲಿ ಪುಲಿಕೇಶಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಸಿ.ಶ್ರೀನಿವಾಸ್​ಗೆ ಅವರ ಗೆಲುವಿಗೆ ಶ್ರಮ
  • 1986ರಿಂದ 2015ರವರೆಗೆ ರಾಜಕೀಯದಲ್ಲಿ ವಿವಿಧ ಹುದ್ದೆಗಳ ನಿರ್ವಹಣೆ
Ex mayor Sampath

ಇತರ ಜನಪ್ರಿಯ ಅಭಿವೃದ್ಧಿ ಕಾರ್ಯಗಳು

  • ಮೊಬೈಲ್ ಇಂದಿರಾ ಕ್ಯಾಂಟೀನ್ ಆರಂಭ
  • ಪ್ರವಾಹದಿಂದ ನಲುಗಿದ್ದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಕುರುಬರಹಳ್ಳಿ ಸಂತ್ರಸ್ತರಿಗೆ ನೆರವು
  • ನಗರದ ವಿವಿಧ ಕಡೆಗಳಲ್ಲಿ ಎಸ್ಕಲೇಟರ್​ಸಹಿತ ಸ್ಕೈವಾಕ್​ಗಳ ನಿರ್ಮಾಣ
  • ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
  • ಮಹಾಲಕ್ಷ್ಮೀ ಬಡಾವಣೆಯ ನಾಗಪುರ ವಾರ್ಡ್​ನಲ್ಲಿ ಡಾ.ರಾಜ್​ಕುಮಾರ್ ಕ್ರೀಡಾಂಗಣ ನಿರ್ಮಾಣ
  • ಮೇಲ್ಸೇತುವೆ ಹಾಗೂ ಇದರ ತಳಭಾಗದಲ್ಲಿ ಕಸ ಹಾಕುವುದನ್ನು ತಪ್ಪಿಸಲು ‘ಸ್ವಚ್ಛ ಬೆಂಗಳೂರು ಸುಂದರ ಫ್ಲೈ ಓವರ್’ ಅಭಿಯಾನ
  • ರಾತ್ರಿ ವೇಳೆ ನಗರದ ಪ್ರದಕ್ಷಿಣೆ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿ
  • ಸ್ಕೌಟ್ಸ್ ಮತ್ತು ಗೈಡ್ಸ್​ಗೆ ನೆರವು
  • ರಾಜಾಜಿನಗರದ ಮಂಜುನಾಥನಗರದಲ್ಲಿ ನಿರ್ವಿುಸಲಾಗಿದ್ದ ಮೇಲ್ಸೇತುವೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತ
  • ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೊಳಿಸಿ ಅನಾವರಣ
  • ಜಯದೇವ ಹೃದ್ರೋಗ ಆಸ್ಪತ್ರೆಗೆ 2 ಕೋಟಿ ರೂ. ದೇಣಿಗೆ
  • ಮೈಸೂರು ಬ್ಯಾ‚‚ಂಕ್ ಸರ್ಕಲ್​ನಲ್ಲಿ ವಿಜಯನಗರ ಹೆಬ್ಬಾಗಿಲು ನಿರ್ವಣಕ್ಕೆ ಶಂಕುಸ್ಥಾಪನೆ
  • ಚೀನಾಕ್ಕೆ ಭೇಟಿ ನೀಡಿ ಸಿಲಿಕಾನ್ ಸಿಟಿಯಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಕರೆ
  • ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಒತ್ತು. ಆಸ್ತಿ ಮಾಲೀಕರಿಂದ ಸಂಗ್ರಹಿಸುವ ತೆರಿಗೆ ಹಣ ಸರ್ಕಾರದ ಖಜಾನೆಗೆ ಸೇರುವಂತೆ ಆನ್​ಲೈನ್ ಸೇವೆ
  • ್ಞಭೈರಸಂದ್ರ ವಾರ್ಡ್​ನಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಸ್ಥಾಪನೆ
  • ಮೆಟ್ರೋದಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲು ನಿಯಮ ಜಾರಿ
  • ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೊಡಗು ಸಂತ್ರಸ್ತರಿಗೆ ಸಹಾಯಹಸ್ತ
  • ಬಿಬಿಎಂಪಿ ಇತಿಹಾಸದಲ್ಲಿ ಅತಿ ಹೆಚ್ಚು ಕೌನ್ಸಿಲ್ (29 ಬಾರಿ) ನಡೆಸಿದ್ದ ಸಂಪತ್​ರಾಜ್
  • ಅನೇಕ ವರ್ಷಗಳಿಂದ ಬಿಬಿಎಂಪಿಗೆ ಸವಾಲಾಗಿದ್ದ ರಕ್ಷಣ ಇಲಾಖೆ ಜಾಗಕ್ಕೆ ಸೇರಿದ್ದ 33 ರಸ್ತೆಗಳನ್ನು ವಾಪಸ್ ಪಡೆದು ವಾಹನ ದಟ್ಟಣೆ ನಿವಾರಣೆಗೆ ಕ್ರಮ
  • ಮಳೆಗಾಲದಲ್ಲಿ ಪರಿವೀಕ್ಷಣೆ
  • ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೆರವು
  • ಯಡಿಯೂರು ವಾರ್ಡ್​ನಲ್ಲಿ ಬಯೋಮಿಟನೇಷನ್ ಘಟಕ ಸ್ಥಾಪನೆಗೆ ಪಾಲಿಕೆಯಿಂದ ಅನುದಾನ ನೀಡಿಕೆ
  • ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಪ್ರತಿಮೆ ಅನಾವರಣ
  • ಮೇಯರ್ ಅವಧಿಯ ಕೊನೇ ದಿನದಂದು ಕಚೇರಿಯ ಆಪ್ತ ಸಿಬ್ಬಂದಿಗೆ ಕಾರು ಚಾಲಕರಾಗಿ ಸೇವೆ ಸಲ್ಲಿಸಿ ಗಮನ ಸೆಳೆದಿದ್ದರು
  • ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಮಂಜೂರು

‘ಬೆಂಗಳೂರು ರತ್ನ’ ಪ್ರಶಸ್ತಿ ಬಂದಿದ್ದಕ್ಕೆ ಖುಷಿಯಾಗಿದೆ. ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ವಿಜಯವಾಣಿ ಪತ್ರಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪತ್ರಿಕೆ ಉತ್ತಮ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಗಳನ್ನು ಮಾಡುವಂತೆ ಆಶಿಸುತ್ತೇನೆ. ನಾನು ಮೇಯರ್ ಆಗಿದ್ದ ಅವಧಿಯಲ್ಲಿ ಮಾಧ್ಯಮಗಳಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿತ್ತು. ನನ್ನ ರಾಜಕೀಯ ಗುರು ಡಿ.ಕೆ. ಶಿವಕುಮಾರ್, ಈ ಕ್ಷೇತ್ರದಲ್ಲಿ ನನ್ನನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

| ಸಂಪತ್​ರಾಜ್, ಮಾಜಿ ಮೇಯರ್

ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಸಂಪತ್​ರಾಜ್ ಅವರಿಗಿದೆ. ಡಿಜೆ ಹಳ್ಳಿ ವಾರ್ಡ್​ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೇಯರ್ ಆಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿಗೆ ಅಡಿಪಾಯ ಹಾಕಿದವರು. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ರಾಜಕೀಯದಲ್ಲಿ ಇನ್ನಷ್ಟು ಬೆಳೆಯುವಂತಾಗಲಿ. ಮುಂದಿನ ದಿನಗಳಲ್ಲಿ ಸಂಪತ್​ರಾಜ್ ಶಾಸಕ ಅಥವಾ ಸಂಸದರಾಗಿ ಆಯ್ಕೆ ಆಗಬೇಕೆಂಬ ಅಭಿಲಾಷೆ ನಮ್ಮದು.

| ಕಬೀರ್ ಅಹ್ಮದ್, ಕಾಂಗ್ರೆಸ್ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net