ನವದೆಹಲಿ: ಜೂನ್ 01ರಿಂದ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಮ್ ಇಂಡಿಯಾ ತನ್ನ ಆಭಿಯಾನವನ್ನು ಜೂನ್ 05ರಂದು ಐರ್ಲೆಂಡ್ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಇನ್ನೂ ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ನಾಯಕ, ರನ್ಮಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೆರಿಬಿಯನ್‌ನಲ್ಲಿನ ನಿಧಾನಗತಿಯ ಪಿಚ್ ಮತ್ತು ಪರಿಸ್ಥಿತಿಗೆ ಕೊಹ್ಲಿಯ ಬ್ಯಾಟಿಂಗ್ ವೇಗ ಸೂಕ್ತವಾಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಆಯ್ಕೆ ಸಮಿತಿ ಭಾವಿಸಿದ್ದು, ಈ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಾಕೌಟ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್; ಆರ್ಸಿಬಿ ಹಾದಿ ಕಷ್ಟಕರ
ಆದರೆ ಈ ಒಂದು ಕಾರಣಕ್ಕಾಗಿ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಏಕೆಂದರೆ ಟಿ-20 ಕ್ರಿಕೆಟ್ನಲ್ಲಿ 117 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 140 ರ ಸ್ಟ್ರೈಕ್ರೇಟ್ನೊಂದಿಗೆ 55ರ ಸರಾಸರಿಯಲ್ಲಿ 1 ಶತಕ, .7 ಅರ್ಧಶತಕಗಳನ್ನು ಒಳಗೊಂಡಂತೆ 4037 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಬದಲಿಗೆ ಯುವ ಆಟಗಾರರಿಗೆ ಹೆಚ್ಚು ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದ್ದು, ಅಫ್ಘಾನಿಸ್ತಾನ ವಿರುದ್ಧದ ಟ-20 ಸರಣಿ ಹೊರತುಪಡಿಸಿ ಯಾವುದೇ ಪಂದ್ಯವನ್ನು ವಿರಾಟ್ ಕೊಹ್ಲಿ ಆಡಿಲ್ಲ. ಇತ್ತೀಚಿಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದರು. ಮುಂಬರವ ಐಪಿಎಲ್ ಟೂರ್ನಿಯಲ್ಲಿ ಅವರ ಪ್ರದರ್ಶನವನ್ನು ಆಧರಿಸಿ ಬಿಸಿಸಿಐ ಆಯ್ಕೆ ಸಮಿತಿ ಅವರನ್ನು ಟಿ-20 ವಿಶ್ವಕಪ್ಗೆ ಆಯ್ಕೆ ಮಾಡುತ್ತದೋ ಇಲ್ಲವೋ ಕಾದು ನೋಡಬೇಕಿದೆ.