

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಹೊಸ ವಿಡಿಯೋಗಳು ಮಾತ್ರವಲ್ಲ ಕೆಲವೊಮ್ಮೆ ಎರಡು ಮೂರು ವರ್ಷದ ಹಳೆಯ ವಿಡಿಯೋಗಳು ಕೂಡ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡು ವೈರಲ್ ಆಗಿಬಿಡುತ್ತವೆ. ಅದೇ ರೀತಿ ಇದೀಗ 2 ವರ್ಷದ ಹಿಂದಿನ ವಿಡಿಯೋವೊಂದು ವೈರಲ್ ಆಗಿದೆ.
ಯಾವುದಪ್ಪಾ ಆ ವಿಡಿಯೋ ಅಂತಿರಾ.. ರಾಷ್ಟ್ರ ರಾಜಧಾನಿ ದೆಹಲಿಯ ಅಪಾರ್ಟ್ಮೆಂಟ್ ಒಂದು ನಿವಾಸಿಗಳು ಕಳ್ಳನಿಗೆ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋ ಆಗಿದೆ. ಹುಟ್ಟುಹಬ್ಬ ಆಚರಣೆ ಹಿಂದಿನ ಕತೆ ಕೇಳಿದ್ರೆ ನಿಮ್ಮ ಮನಸ್ಸು ಕೂಡ ಕದಡಬಹುದು. ಏಕೆಂದರೆ, ಖದೀಮನ ಕತೆಯೇ ಆ ರೀತಿ ಇದೆ.
ಹಾಗಾದರೆ, ಖದೀಮನ ಕತೆಗೆ ಬಂದು ಬಿಡೋಣ. ಏನಾಯಿತು ಅಂದರೆ, ದೆಹಲಿಯ ವಸತಿ ಸಂಕೀರ್ಣದಲ್ಲಿ ಆಗಾಗ ಕಳ್ಳತನ ನಡೆಯುತ್ತಿತ್ತು. ಇದು ಅಪಾರ್ಟ್ಮೆಂಟ್ ಜನರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಕಳ್ಳತನಕ್ಕೆ ಬ್ರೇಕ್ ಹಾಕಲು ಸಾಕಷ್ಟು ಕ್ರಮ ತೆಗೆದುಕೊಂಡರು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಒಮ್ಮೆ ಕಳ್ಳರನ್ನು ಹಿಡಿಯಲೇಬೇಕು ಎಂಬ ನಿರ್ಧಾರಕ್ಕೆ ನಿವಾಸಿಗಳು ಬಂದಿದ್ದರು.
ಒಮ್ಮೆ ಮೂವರು ಖದೀಮರು ಅಪಾರ್ಟ್ಮೆಂಟ್ ಒಳಗೆ ನುಸುಳಿ ಕಳ್ಳತನ ಮಾಡಿ ಎಸ್ಕೇಪ್ ಆಗುವಾಗ ಮೂವರಲ್ಲಿ ಓರ್ವ ಅಪ್ರಾಪ್ತ ಖದೀಮ ಸಿಕ್ಕಿಬಿದ್ದಿದ್ದ. ನಿವಾಸಿಗಳ ಕೈಗೆ ಸಿಕ್ಕಿಬಿದ್ದಿದ್ದ ಖದೀಮ ಗಢಗಢ ನಡುಗಿ ಹೋಗಿ ಎಲ್ಲರ ಮುಂದೆ ಕಣ್ಣೀರಿಟ್ಟಿದ್ದಾನೆ. ಇಂದು ನನ್ನ ಹುಟ್ಟುಹಬ್ಬ. ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆ ತೀರಿ ಹೋದರು. ನನ್ನ ಕುಟುಂಬಕ್ಕೆ ಖಾಯಂ ಆದಾಯ ಅಂತಾ ಯಾವುದು ಇಲ್ಲ. ಹುಟ್ಟುಹಬ್ಬ ಆಚರಣೆಗೆ ದುಡ್ಡು ಬೇಕಾಗಿತ್ತು. ಹೀಗಾಗಿ ಕಳ್ಳತನ ಮಾಡಬೇಕಾಯಿತು ಎಂದು ಅಪ್ರಾಪ್ತ ಖದೀಮ ಬಾಯ್ಬಿಟ್ಟಿದ್ದಾನೆ.
ಖದೀಮನ ಮಾತು ಕೇಳಿ ಕರಗಿ ಹೋದ ಅಪಾರ್ಟ್ಮೆಂಟ್ ನಿವಾಸಿಗಳು, ಅಲ್ಲಿಯೇ ಕೇಕ್ ಕತ್ತರಿಸಿ ಆತನ ಹುಟ್ಟುಹಬ್ಬ ಆಚರಿಸಿದ್ದಾರೆ. ಗಮನಾರ್ಹವೆಂದರೆ, ಕೇಕ್ ಮೇಲೆ ಹಿಂದಿಯಲ್ಲಿ ಛೋರ್ (ಕಳ್ಳ) ಎಂದು ಬರೆಯಲಾಗಿತ್ತು. ಅಲ್ಲದೆ, ಕಳ್ಳನಿಗಾಗಿ ಹಾಡು ಸಹ ಹಾಡಲಾಯಿತು ಮತ್ತು ತಂಪು ಪಾನೀಯ ಹಾಗೂ ಸ್ನ್ಯಾಕ್ಸ್ ಕೂಡ ವಿತರಣೆ ಮಾಡಿದರು. ಬರ್ತಡೇ ಆಚರಣೆ ಬಳಿಕ ಖದೀಮನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಅಂದಹಾಗೆ ಈ ಘಟನೆ 2020ರ ಸೆಪ್ಟೆಂಬರ್ ತಿಂಗಳಲ್ಲೇ ನಡೆದಿದೆ. ಆಗಲೂ ಸಹ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ವಿಡಿಯೋವನ್ನು ಖುಷ್ಬೂ ಮ್ಯಾಟೋ ಹೆಸರಿನ ಟ್ವಿಟರ್ ಖಾತೆಯಲ್ಲಿ ಮತ್ತೆ ಪೋಸ್ಟ್ ಮಾಡಲಾಗಿದ್ದು, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನ್ 27ರಂದು ಪೋಸ್ಟ್ ಮಾಡಿರುವ ವಿಡಿಯೋ, ಇದುವರೆಗೂ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. (ಏಜೆನ್ಸೀಸ್)