ನಟಿ ಮೀನಾ ಪತಿ ವಿದ್ಯಾಸಾಗರ್ ಅಕಾಲಿಕ​ ಸಾವಿಗೆ ನಿಖರ ಕಾರಣ ತಿಳಿಸಿದ ತಮಿಳುನಾಡು ಆರೋಗ್ಯ ಸಚಿವ

TN Minister
Published on

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ಅವರ ಪತಿ ವಿದ್ಯಾಸಾಗರ್​ ಮಂಗಳವಾರ (ಜೂನ್​ 28) ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ವಿದ್ಯಾಸಾಗರ್​ ಅವರ ಅಕಾಲಿಕ ಮರಣ ಮೀನಾ ಕುಟುಂಬಕ್ಕೆ ಮಾತ್ರವಲ್ಲದೆ, ಕಾಲಿವುಡ್​ ಸಿನಿರಂಗಕ್ಕೂ ಶಾಕಿಂಗ್ ಸಂಗತಿಯಾಗಿದೆ. ವಿದ್ಯಾಸಾಗರ್​ ಅವರ ಅಂತಿಮ ಸಂಸ್ಕಾರವನ್ನು ಬುಧವಾರ (ಜೂನ್ 29) ಬೆಸಂತ್​ ನಗರದ ಚಿತಾಗಾರದಲ್ಲಿ ನಡೆಸಲಾಗಿದೆ. ಪತ್ನಿ ಮೀನಾ ಅವರು ಕಣ್ಣಲ್ಲಿ ನೀರು ತುಂಬಿಕೊಂಡೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ವಿದ್ಯಾಸಾಗರ್‌ಗೆ ಕರೊನಾ ಸೋಂಕು ತಗುಲಿರುವುದು ಅವರ ಸಾವಿಗೆ ಕಾರಣ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಅವರ ಸಾವಿಗೆ ನಿಖರ ಕಾರಣವನ್ನು ತಮಿಳುನಾಡಿನ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್​ ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್​ನಿಂದ ವಿದ್ಯಾಸಾಗರ್​ ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು. ಆಕ್ಸಿಜನ್​ ಸಿಲಿಂಡರ್​ ನೆರವಿನಿಂದ ಮನೆಯಲ್ಲೇ ವಿದ್ಯಾಸಾಗರ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಶ್ವಾಸಕೋಶದ ವೈಫಲ್ಯದಿಂದಾಗಿ ಕಳೆದ ಆರು ತಿಂಗಳಿಂದ ವಿದ್ಯಾಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅಂಗಾಂಗ ಕಸಿಗಾಗಿ ಕಾಯುತ್ತಿದ್ದರು. ಕೆಲವು ವಾರಗಳ ಹಿಂದಷ್ಟೇ ವಿದ್ಯಾಸಾಗರ್​ರನ್ನು ಭೇಟಿ ಮಾಡಿದ್ದೆ. ಆದರೆ, ಅವರು ಪ್ರಜ್ಞಾಹೀನರಾಗಿದ್ದರು. ಶ್ವಾಸಕೋಶ ಮತ್ತು ಹೃದಯ ಕಸಿ ಮಾಡಲು ಸಿಎಂ ಎಂ.ಕೆ. ಸ್ಟಾಲಿನ್ ತನ್ನಿಂದಾದಷ್ಟು ಪ್ರಯತ್ನಿಸಿದರು. ಆದರೂ, ಸರಿಯಾದ ದಾನಿ ಲಭ್ಯವಾಗಲಿಲ್ಲ ಎಂದು ಸುಬ್ರಮಣಿಯನ್​ ಹೇಳಿದರು.

ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಮತ್ತು ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಕೋವಿಡ್ 19 ನಿಂದ ಅಲ್ಲ ಎಂದು ಸುಬ್ರಮಣಿಯನ್​ ಕೊನೆಯಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net