ತಮ್ಮ ಸಿನಿ ಜೀವನದ ಅತ್ಯಂತ ಕೆಟ್ಟ ಸಿನಿಮಾದ ಹೆಸರನ್ನು ಬಹಿರಂಗಪಡಿಸಿದ ನಟಿ ಪೂಜಾ ಹೆಗ್ಡೆ!

Pooja Hegde
Published on

ಚೆನ್ನೈ: ಈ ವರ್ಷ ಬಿಡುಗಡೆಯಾದ ಮೂರು ಚಿತ್ರಗಳು ಸೋತರೂ, ಪೂಜಾ ಹೆಗ್ಡೆಗೆ ಕಿಂಚಿತ್ತೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಈಗಲೂ ಪೂಜಾಗೆ ಟಾಲಿವುಡ್​ನಲ್ಲಿ ಅಷ್ಟೇ ಬೇಡಿಕೆ ಇದ್ದು, ಇನ್ನೊಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರ ಮೊದಲ ಹಂತವಾಗಿ ಪೂಜಾ, ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ಪೂಜಾ ಅವರು ತಮ್ಮ ಜೀವನದಲ್ಲಿ ತಾವು ಒಪ್ಪಿಕೊಂಡು ಮಾಡಿದಂತಹ ಅತ್ಯಂತ ಕೆಟ್ಟ ಸಿನಿಮಾ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್‌ನಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾ, ತಾನು ಬಾಲಿವುಡ್‌ನಲ್ಲಿ ಕೆಟ್ಟ ಸಿನಿಮಾ ಮಾಡಿದ್ದೇನೆ. ಹೀಗಾಗಿ ಒಂದು ವರ್ಷ ನನಗೆ ಯಾವುದೇ ಆಫರ್‌ಗಳು ಬಂದಿರಲಿಲ್ಲ ಎಂದು ಹೇಳಿದರು.

ಬಾಲಿವುಡ್​ನಲ್ಲಿ ಪದಾರ್ಪಣೆ ಮಾಡಿದ ಸಿನಿಮಾ ಅಂದರೆ ಮಹಂಜೊದಾರೋ. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಮಕಾಡೆ ಮಲಗಿತು. ನನ್ನ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಸಿನಿಮಾ ಆಗಿಯೇ ಉಳಿದಿದೆ. ಏಕೆಂದರೆ, ಆ ಸಿನಿಮಾ ಬಳಿಕ ಒಂದು ವರ್ಷದವರೆಗೆ ಯಾವುದೇ ಸಿನಿಮಾ ಆಫರ್​ಗಳು ಬರಲಿಲ್ಲ. ಅಲ್ಲದೆ, ನನ್ನನ್ನು ಐರಲ್​ ಲೆಗ್​ ಎಂದು ಕರೆದರು. ಆದರೆ, ತೆಲುಗಿನಲ್ಲಿ ಸರಣಿ ಯಶಸ್ಸುಗಳ ಬಳಿಕ ಆ ಕೊರತೆ ನೀಗಿತು ಎಂದು ಪೂಜಾ ಹೇಳಿದ್ದಾರೆ.

ತೆಲುಗಿನಲ್ಲಿ ಸಾಲು ಸಾಲು ಯಶಸ್ಸಿನ ಬಳಿಕ ಸಿನಿಮಾ ಆಫರ್​ಗಳು ಬಂದವು. ಅಂದಿನಿಂದ ನಾನು ಎಂದಿಗೂ ಹಿಂತಿರುಗಿ ನೋಡಲಿಲ್ಲ. ಇಂದಿಗೂ ಸಾಕಷ್ಟು ಆಫರ್​ಗಳು ಬರುತ್ತಿವೆ ಎಂದು ಖುಷಿ ವ್ಯಕ್ತಪಡಿಸಿದ ಪೂಜಾ, ಇಂದಿಗೂ ನನ್ನ ಜೀವನದ ಅತ್ಯಂತ ಕಳಪೆ ಸಿನಿಮಾವಾಗಿ ಮಹಂಜೊದಾರೋ ಉಳಿದುಕೊಂಡಿದೆ ಎಂದರು.

ಅಂದಹಾಗೆ ಮಹಂಜೊದಾರೋ 2016ರಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ ನಾಯಕರಾಗಿ ನಟಿಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದರು. ಈ ಸಿನಿಮಾವನ್ನು ಆಶುತೋಷ್​ ಗೌರಿಕರ್​ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net