ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ: ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ, ಮತ್ತೆ ಮುನ್ನೆಲೆಗೆ ಬಂದ 2017ರ ಟ್ವೀಟ್​

Swara
Published on

ಮುಂಬೈ: ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಸ್ವರಾ ಭಾಸ್ಕರ್​ ಕೂಡ ಒಬ್ಬರು. ಸಾಕಷ್ಟು ವಿವಾದಗಳಿಂದಲೂ ಸ್ವರಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ, ಈ ಭಾರಿ ಗಂಭೀರ ವಿಚಾರವೊಂದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ಬಾಲಿವುಡ್​ ಬ್ಯೂಟಿ ಸ್ವರಾ, ಮುಂಬೈನ ವೆರ್ಸೋವಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ದೂರು ದಾಖಲಿಸಿದ್ದಾರೆ.

ಸ್ವರಾ ನೀಡಿರುವ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರವನ್ನು ವರ್ಸೊವಾದಲ್ಲಿರುವ ಸ್ವರಾ ಅವರ ನಿವಾಸಕ್ಕೆ ಕಳುಹಿಸಲಾಗಿದೆ. ದೂರನ್ನು ಸ್ವೀಕರಿಸಿದ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುತಿಸಲಾಗದ ಅಪರಾಧವನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ ವೀರ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. 2017 ರಲ್ಲಿ ಸ್ವರಾ ಭಾಸ್ಕರ್ ಅವರು ಟ್ವೀಟ್ ಒಂದನ್ನು ಮಾಡಿದ್ದರು. ಸಾವರ್ಕರ್ ಬ್ರಿಟಿಷ್ ಸರ್ಕಾರ ಬಳಿ ಕ್ಷಮೆಯಾಚಿಸಿದ್ದರ. ಜೈಲಿನಿಂದ ಬಿಡುವಂತೆ ಮನವಿ ಮಾಡಿದ್ದರು. ಹೀಗಾಗಿ ಅವರು ಖಚಿತವಾಗಿ ‘ವೀರ್’ ಅಲ್ಲ ಎಂದಿದ್ದರು.

ಇದೀಗ ಸ್ವರಾ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ನೋಡಿದರೆ ಹಿಂದಿನ ಟ್ವೀಟ್​ಗೂ ಬೆದರಿಕೆ ಪತ್ರಕ್ಕೂ ಸಂಬಂಧ ಇದೆ ಎನ್ನಲಾಗಿದೆ. ಸದ್ಯ ಸ್ವರಾ ಅವರಿಗೆ ರಕ್ಷಣೆಯನ್ನು ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net