More

    ಕೈಕೋಳಕ್ಕೆ ಹೈಕೋರ್ಟ್ ಕೊಕ್​​!; ಬಲವಾದ ಕಾರಣವಿಲ್ಲದೆ ಆರೋಪಿಗೆ ಬೇಡಿ ತೊಡಿಸುವಂತಿಲ್ಲ..

    ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗುವ ಎಲ್ಲ ಆರೋಪಿಗಳಿಗೂ ಬೇಡಿ ತೊಡಿಸಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಸಕಾರಣವಿದ್ದರೆ ಮಾತ್ರ ಕೈಕೋಳ ಹಾಕಲು ಅವಕಾಶವಿದ್ದು, ಅಂಥ ಸಮಯದಲ್ಲಿ ಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಬೇಡಿ ತೊಡಿಸಿದ್ದಕ್ಕೆ ಪರಿಹಾರ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸುಪ್ರೀತ್ ಈಶ್ವರ್ ದಿವಾಟೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಜತೆಗೆ, ಆರೋಪಿ, ವಿಚಾರಣಾಧೀನ ಕೈದಿ ಅಥವಾ ಅಪರಾಧಿಗಳಿಗೆ ಬೇಡಿ ತೊಡಿಸಲೇಬೇಕಾದ ಸಂದರ್ಭದಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲ ಮಾರ್ಗಸೂಚಿಗಳನ್ನು ರೂಪಿಸಿರುವ ನ್ಯಾಯಪೀಠ, ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.

    ಚೆಕ್ ಅಮಾನ್ಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಬಂಧನ ವಾರಂಟ್ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸುವ ವೇಳೆ ಕಾನೂನು ಬಾಹಿರವಾಗಿ ಕೈಕೋಳ ಹಾಕಿರುವ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಪೀಠ, ಅರ್ಜಿದಾರರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

    ಪ್ರಕರಣವೇನು?: ಚೆಕ್ ಅಮಾನ್ಯ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಚಿಕ್ಕೋಡಿಯ ಸುಪ್ರೀತ್ ಗೈರು ಹಾಜರಾಗಿದ್ದರು. 2019ರಲ್ಲಿ ಚಿಕ್ಕೋಡಿ ತಾಲೂಕಿನ ವಿಚಾರಣಾ ನ್ಯಾಯಾಲಯ ಸುಪ್ರೀತ್ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು. ಅದರ ಆಧಾರದಲ್ಲಿ ಸುಪ್ರೀತ್ ಬಂಧಿಸಿದ್ದ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅವರಿಗೆ ಬೇಡಿ ತೊಡಿಸಿದ್ದರು. ಪೊಲೀಸರ ಈ ಕ್ರಮ ಕಾನೂನುಬಾಹಿರವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ ಪೊಲೀಸರಿಂದ ಪರಿಹಾರ ಕೊಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಸುಪ್ರೀತ್, ಪೊಲೀಸರು ತಮಗೆ ಬೇಡಿ ಹಾಕಿರುವುದನ್ನು ಸಾಬೀತುಪಡಿಸುವ ವಿಡಿಯೋ ಅನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಯಾವಾಗ ತೊಡಿಸ್ಬೇಕು?: ಆರೋಪಿ ಅಥವಾ ವಿಚಾರಣಾಧೀನ ಕೈದಿ ತಪ್ಪಿಸಿಕೊಳ್ಳುವ, ತನಗೆ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಮತ್ತೊಬ್ಬರಿಗೆ ಹಾನಿ ಮಾಡುವ ಸಾಧ್ಯತೆ ಇದ್ದರೆ ಅಂತಹ ಸಂದರ್ಭದಲ್ಲಿ ಅಂತಿಮ ಮಾರ್ಗವಾಗಿ ಬೇಡಿ ತೊಡಿಸಬೇಕು. ಆರೋಪಿಗಳ ವಿರುದ್ಧದ ಅಪರಾಧದ ಸ್ವರೂಪ ಹಾಗೂ ಆ ಅಪರಾಧಕ್ಕೆ ನೀಡಬಹುದಾದ ಶಿಕ್ಷೆಯ ಪ್ರಮಾಣದ ಆಧಾರದಲ್ಲಿ ಬೇಡಿ ತೊಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ಮಾರ್ಗಸೂಚಿಗಳೇನು?

    • ಆರೋಪಿ, ವಿಚಾರಣಾಧೀನ ಕೈದಿ ಅಥವಾ ಕೈದಿ ಸೇರಿ ಯಾವುದೇ ವ್ಯಕ್ತಿಗೆ ಬಲವಾದ ಕಾರಣಗಳಿಲ್ಲದೆ ಬೇಡಿ ತೊಡಿಸುವಂತಿಲ್ಲ. ತೊಡಿಸಲೇಬೇಕಾದ ಸಂದರ್ಭವಿದ್ದರೆ, ಕೇಸ್ ಡೈರಿ ಅಥವಾ ಇತರ ದಾಖಲೆಗಳಲ್ಲಿ ಕಾರಣ ನಮೂದಿಸಬೇಕು.
    • ಕೋರ್ಟ್​ಗೆ ಹಾಜರುಪಡಿಸುವ ಆರೋಪಿ, ಕೈದಿಗಳನ್ನು ನ್ಯಾಯಾಧೀಶರು ಕೈಕೋಳ ಹಾಕಲಾಗಿತ್ತೇ ಎಂಬ ಬಗ್ಗೆ ವಿಚಾರಿಸಬೇಕು. ಒಂದು ವೇಳೆ ಬೇಡಿ ಹಾಕಿ ಕರೆತಂದಿದ್ದರೆ ಅದಕ್ಕೆ ಪೊಲೀಸರು ಕಾರಣ ನೀಡಬೇಕು.
    • ಸಾಧ್ಯವಾದಷ್ಟೂ ವಿಡಿಯೋ ಕಾನ್ಪರೆನ್ಸ್ ಮುಖಾಂತರವೇ ಕೈದಿಗಳನ್ನು ಹಾಜರುಪಡಿಸಬೇಕು. ಖುದ್ದು ಹಾಜರಿಗೆ ನ್ಯಾಯಾಲಯ ಸೂಚಿಸಿದ ಸಂದರ್ಭದಲ್ಲಿ ಮಾತ್ರ ಕೋರ್ಟ್​ಗೆ ಕರೆತರಬೇಕು.
    • ಕೈದಿಗಳನ್ನು ಕೋರ್ಟ್​ಗೆ ಹಾಜರುಪಡಿಸುವ ಸಂದರ್ಭ ಬೇಡಿ ತೊಡಿಸಲು ಕೋರ್ಟ್​ನಿಂದಲೇ ಆದೇಶ ಪಡೆಯಬೇಕು.

    ಅಕ್ರಮ ಪ್ರಾಣಿವಧೆ ತಡೆಗೆ ಕ್ರಮಗಳೇನು?

    ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಅಕ್ರಮವಾಗಿ ಪ್ರಾಣಿಗಳ ವಧೆ ಅಥವಾ ಸಾಗಣೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ 2021ರ ಡಿ.1ರಂದು ಹೊರಡಿಸಿರುವ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ‘ಗೋ ಗ್ಯಾನ್ ಫೌಂಡೇಷನ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹೈಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಕೈಗೊಂಡಿಲ್ಲ ಎಂದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಹೈಕೋರ್ಟ್ ಆದೇಶ ಪಾಲನೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರ ಮುಂದೂಡಿತು.

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts