

ರಾಂಪುರ: ಮರಣ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಉಂಟಾದ ವಾಗ್ವಾದ ತಾರಕಕ್ಕೇರಿ ನರ್ಸ್ ಒಬ್ಬಳು ಸಾರ್ವಜನಿಕರ ಎದುರಲ್ಲೇ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ ರೋಗಿಗಳಿಂದ ತುಂಬಿದ್ದ ವೈದ್ಯರ ಕೊಠಡಿಗೆ ಬಂದ ನರ್ಸ್, ಸಾವಿಗೀಡಾದ ರೋಗಿಯೊಬ್ಬರ ಮರಣ ಪ್ರಮಾಣ ಪತ್ರ ನೀಡುವಂತೆ ಕೇಳುತ್ತಾಳೆ. ಇದರ ಬೆನ್ನಲ್ಲೇ ಇಬ್ಬರ ನಡುವೆ ವಾಗ್ವಾದ ಶುರುವಾಗುತ್ತದೆ. ತಕ್ಷಣ ನರ್ಸ್ ವೈದ್ಯನ ಕಪಾಳಕ್ಕೆ ಬಾರಿಸುತ್ತಾಳೆ. ಪ್ರತಿಯಾಗಿ ವೈದ್ಯನು ಸಹ ಆಕೆಗೆ ಬಾರಿಸುತ್ತಾರೆ.
ಈ ದೃಶ್ಯವನ್ನು ಆಸ್ಪತ್ರೆಯಲ್ಲಿದ್ದ ಸ್ಥಳೀಯರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ಈ ಘಟನೆ ಸೋಮವಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಆದೇಶಿಸಿದ್ದಾರೆ. ಸದ್ಯ ರೋಗಿಗಳ ಮುಂದೆಯೇ ನರ್ಸ್ ಮತ್ತು ವೈದ್ಯ ಕಿತ್ತಾಡಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)