

ವಿಜಯವಾಡ: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್ ನಾಯ್ಕ ಸಾಯಿತೇಜ್ ಕೂಡ ಒಬ್ಬರು. ಇಂದು ಸಾಯಿತೇಜ್ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು.
ಅಂತ್ಯಕ್ರಿಯೆಗೂ ಮುನ್ನ ಸಾಯಿತೇಜ್ ಪಾರ್ಥೀವ ಶರೀರ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಆಂಧ್ರದ ಚಿತ್ತೂರಿಗೆ ಆಗಮಿಸಿತು. ಬಳಿಕ ಪಾರ್ಥೀವ ಶರೀರವನ್ನು ಪುಂಗನೂರು ರಸ್ತೆ ಮಾರ್ಗವಾಗಿ ಸಾಯಿತೇಜ್ ಅವರ ಸ್ವಗ್ರಾಮ ಎಗುವರೆಗಡಕ್ಕೆ ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಬಹುಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ವೀರಪುತ್ರನಿಗೆ ಅಂತಿಮ ನಮನವನ್ನು ಸಲ್ಲಿಸಿ, ಕಣ್ಣೀರಿನ ವಿದಾಯ ಹೇಳಿದರು.
ಘಟನೆ ನಡೆದ ಐದು ದಿನಗಳ ನಂತರ ಸಾಯಿತೇಜ್ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತರಲಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಸೇನಾ ಗೌರವಗಳೊಂದಿಗೆ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಇದಕ್ಕೂ ಮುನ್ನ ಮೆರವಣಿಗೆಯ ವೇಳೆ ಮನಕಲಕುವ ದೃಶ್ಯವೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು. ಹುತಾತ್ಮ ಸಾಯಿತೇಜ್ ಅವರ 5 ವರ್ಷದ ಪುತ್ರ ಮೋಕ್ಷಜ್ಞ ತಂದೆಯ ಫೋಟೋಗೆ ಮುತ್ತಿಕ್ಕಿದ್ದು ಮನಕರಗುವಂತಿತ್ತು. ಇಡೀ ಗ್ರಾಮವೇ ಸಾಯಿತೇಜ್ಗಾಗಿ ಕಣ್ಣೀರು ಸುರಿಸಿದರು. ಮೆರವಣಿಗೆಯ ವಾಹನಕ್ಕೆ ಹೂವಿನ ಮಳೆಗೆರೆದು, ಕಂಬನಿ ಮಿಡಿದರು.
ಡಿ. 8ರ ಬುಧವಾರದಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರಿನ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಸಿಡಿಎಸ್ ಬಿಪಿನ್ ರಾವತ್ ಜತೆ ತೆರಳುವಾಗ ಹೆಲಿಕಾಪ್ಟರ್ ಪತನವಾಗಿ ಮೃತಪಟ್ಟ 13 ಮಂದಿಯಲ್ಲಿ ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್ ಕೂಡ ಒಬ್ಬರು. ಡಿಎನ್ಎ ಪರೀಕ್ಷೆ ಮೂಲಕ ಶನಿವಾರ ಬೆಳಗ್ಗೆ ಸಾಯಿತೇಜ್ ಅವರ ಮೃತದೇಹವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. (ಏಜೆನ್ಸೀಸ್)