ಬಂಗೀ ಜಂಪಿಂಗ್​ ವೇಳೆ ಬಾಯ್​ಫ್ರೆಂಡ್​ ಹೇಳಿದ ಒಂದೇ ಮಾತಿಂದ ದುರಂತ ಸಾವಿಗೀಡಾದ ಯುವತಿ!

Girl
Published on

ಬೊಗತಾ: ಬಂಗೀ ಜಿಗಿತ ಅಥವಾ ಬಂಗೀ ಜಂಪಿಂಗ್​ ವೇಳೆ ರೋಪ್​ ಅಳವಡಿಸುವುದಕ್ಕೂ ಮುನ್ನ ತಪ್ಪಾದ ಸಿಗ್ನಲ್​ನಿಂದಾಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಕೊಲಂಬಿಯಾದಲ್ಲಿ ನಡೆದಿದೆ.

ಯೆಸಿನಿಯಾ ಮೊರಾಲೆಸ್​ (25) ಮೃತ ದುರ್ದೈವಿ. ಉತ್ತರ ಕೊಲಂಬಿಯಾದಲ್ಲಿರುವ 40 ಮೀಟರ್​ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾಳೆ. ಬಾಯ್​ಫ್ರೆಂಡ್​ ನೀಡಿದ "ಗೋ" ಸಿಗ್ನಲ್​ನಿಂದ ಬಂಗೀ ಜಿಗಿತ ಮಾಡಿದ ಯುವತಿ ಸಾವಿನ ಕದ ತಟ್ಟಿದ್ದಾಳೆ.

ಸಂತ್ರಸ್ತೆ ಬಂಗೀ ಜಂಪ್​ ಮಾಡಿರುವ ವಿಡಿಯೋವನ್ನು ಮತ್ತೊಬ್ಬ ಪ್ರವಾಸಿಗ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಸುಮಾರು 100 ಮಂದಿ ಬಂಗೀ ಜಂಪ್​ ಮಾಡಲು 40 ಮೀಟರ್​ ಎತ್ತರದ ಸೇತುವೇ ಮೇಲಿದ್ದರು. ಇದೇ ವೇಳೆ ಸಂತ್ರಸ್ತೆ ಯೆಸಿನಿಯಾ ತನ್ನ ಬಾಯ್​ಫ್ರೆಂಡ್​ ಜತೆಯಲ್ಲಿ ಬಂದಿದ್ದಳು.

ಬಂಗೀ ಜಂಪಿಂಗ್​ ವೇಳೆ ತಮ್ಮ ಸರದಿ ಬಂದಾಗ ಮೊದಲು ಯೆಸಿನಿಯಾ ತೆರಳಿದಳು. ಅವಳ ಹಿಂದೆಯೇ ಬಾಯ್​ಫ್ರೆಂಡ್​ ಇದ್ದ. ಬಂಗೀ ರೋಪ್​ ಅನ್ನು ಆಕೆಯ ಕಾಲುಗಳಿಗೆ ಇನ್ನು ಅಳವಡಿಸಿಯೇ ಇರಲಿಲ್ಲ. ಇದೇ ವೇಳೆ ಆಕೆಯ ಬಾಯ್​ಫ್ರೆಂಡ್​ "ಗೋ" ಎಂದು ಸಿಗ್ನಲ್​ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡ ಯೆಸಿನಿಯಾ ಸೇತುವೆಯಿಂದ ಕೆಳಗೆ ಜಿಗಿದಿದ್ದಾಳೆ. ಕೆಳಗೆ ಬೀಳುವಾಗ ಶಾಕ್​ನಿಂದ ಗಾಳಿಯಲ್ಲೇ ಆಕೆಗೆ ತೀವ್ರ ಹೃದಯಾಘಾತವಾಗಿದೆ. ತುರ್ತುಸೇವೆ ಆಗಮಿಸುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಪ್ರೇಯಸಿ ಕಣ್ಣ ಎದುರಲ್ಲೇ ಪ್ರಪಾತಕ್ಕೆ ಬೀಳುವುದನ್ನು ನೋಡಿ ಎದೆಗುಂದಿದ ಬಾಯ್​ಫ್ರೆಂಡ್​ ಅವಳತ್ತ ಓಡಿ ಹೋಗಿ ಶ್ವಾಸಕೋಶ ಪ್ರಚೋದಕ (ಸಿಪಿಆರ್) ಮಾಡಲು ತೀವ್ರವಾಗಿ ಪ್ರಯತ್ನಿಸಿದ್ದಾನೆ. ಆದರೆ, ಏನೂ ಪ್ರಯೋಜನವಾಗಲಿಲ್ಲ. ತವರು ನೆಲ ಮೆಡೆಲಿನ್‌ನ ಸಿಮಾನ್ ಬೊಲಿವಾರ್​​ನಲ್ಲಿ ನಡೆದ ಸಮಾರಂಭದ ನಂತರ ಯೆಸಿನಿಯಾಳನ್ನು ಸಮಾಧಿ ಮಾಡಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net