

ಹೈದರಾಬಾದ್: ಮೊದಲ ಮದುವೆಯನ್ನು ಮರೆಮಾಚಿ ವಿವಾಹೇತರ ಸಂಬಂಧವನ್ನು ಮುಂದುವರಿಸಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ನನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಟಾಪ್ಪಚಬುತ್ರ ಪೊಲೀಸ್ ಠಾಣೆಯ ಎಸ್ಐ ಮಧು ಎಂಬುವರನ್ನು ಅಮಾನತು ಮಾಡಲಾಗಿದೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ಮತ್ತೊಂದು ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡು ಇದೀಗ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಎಸ್ಐ ಮಧು ವಿರುದ್ಧ ದೂರು ನೀಡಿದ್ದಾಳೆ.
ಮಧು ಹಿಂದೆ ಚಿಕ್ಕಲಗುಡ ಮತ್ತು ಬೆಗುಂಪೇಟೆ ಪೊಲೀಸ್ ಠಾಣೆಗಳಲ್ಲಿ ಎಸ್ಐ ಆಗಿ ಕೆಲಸ ಮಾಡಿದ್ದು, ಕೆಲವು ತಿಂಗಳ ಹಿಂದೆ ಟಾಪ್ಪಚಬುತ್ರಗೆ ವರ್ಗಾವಣೆ ಮಾಡಲಾಗಿತ್ತು. ಸಂತ್ರಸ್ತ ಯುವತಿ ಬೆಗುಂಪೇಟೆ ಹಾಗೂ ಟಾಪ್ಪಚಬುತ್ರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೆ, ಪಶ್ಚಿಮ ವಲಯದ ಡಿಸಿಪಿ ಕಚೇರಿಯಲ್ಲೂ ಪ್ರಕರಣ ದಾಖಲಿಸಿದ್ದಾಳೆ.
ಮದುವೆಯಾಗುವುದಾಗಿ ನನ್ನನ್ನು ನಂಬಿಸಿ, ವಿವಾಹೇತರ ಸಂಬಂಧವನ್ನು ಬೆಳೆಸಿದ್ದಾರೆ. ಇದೀಗ ಮದುವೆ ಆಗು ಅಂದರೆ ತಿರಸ್ಕರಿಸುತ್ತಿದ್ದಾರೆ. ಅಲ್ಲದೆ, ಮೊದಲೇ ಮದುವೆ ಆಗಿರುವುದನ್ನು ಮುಚ್ಚಿಟ್ಟು ವಂಚನೆ ಮಾಡಿದ್ದಾರೆಂದು ಯುವತಿ ದೂರಿದ್ದಾಳೆ. ಈ ಮಧ್ಯೆ ನನ್ನ ದೂರಿಗೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಇದೇ ತಿಂಗಳ 19ರಂದು ಸಿಕಂದರಬಾದ್ ಪೊಲೀಸ್ ಪರೇಡ್ ಮೈದಾನದ ಬಳಿ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದಾದ ಬಳಿಕ ಬೆಗುಂಪೇಟ್ ಠಾಣೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಯಿತು. ಪ್ರಕರಣ ಪೊಲೀಸ್ ಆಯುಕ್ತರ ಗಮನಕ್ಕೆ ಬಂದಿದ್ದು, ಸದ್ಯ ಎಸ್ಐ ಮಧುರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ. ಹಿಂದೆ ಚಿಕಲಗುಡದಲ್ಲಿ ಕೆಲಸ ಮಾಡುವಾಗಲೂ ಅಮಾನತಾಗಿದ್ದರು. (ಏಜೆನ್ಸೀಸ್)