ದಿಢೀರ್​ ಶ್ರೀಮಂತರಾಗಲು 14 ವರ್ಷದ ಮಗಳನ್ನೇ ಬಲಿ ಕೊಟ್ಟ ಪಾಲಕರು! ಬಯಲಾಯ್ತು ಮತ್ತೊಂದು ಭೀಕರ ಘಟನೆ

Human Sacrifice
Published on

ಗಾಂಧಿನಗರ: ದೇಶದ ಜನತೆಯನ್ನು ಆಘಾತಕ್ಕೆ ದೂಡಿರುವ ಕೇರಳದ ನರಬಲಿ ಪ್ರಕರಣದ ರೀತಿಯಲ್ಲೇ ಮತ್ತೊಂದು ಪ್ರಕರಣ ಇದೀಗ ಗುಜರಾತ್​ನಿಂದ ವರದಿಯಾಗಿದೆ. ದಿಢೀರ್​ ಶ್ರೀಮಂತರಾಗುವ ದುರುದ್ದೇಶದಿಂದ ಗಿರ್​ ಸೊಮನಾಥ್​ ಜಿಲ್ಲೆಯ ಧವಾ ಗ್ರಾಮದ ಕುಟುಂಬವೊಂದು 14 ವರ್ಷದ ಮಗಳನ್ನು ವಾಮಾಚಾರಕ್ಕೆ ಬಲಿ ನೀಡಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಈ ಘಟನೆ ನವರಾತ್ರಿಯ ದಿನದಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾರಿ ಸಂಪತ್ತು ಪಡೆಯುತ್ತೇವೆ ಎಂಬ ಮೂಡನಂಬಿಕೆಗೆ ಒಳಗಾಗಿ ತಮ್ಮ ಮಗಳನ್ನು ಕುಟುಂಬ ಬಲಿ ನೀಡಿದೆ ಎಂದು ನೆರೆಹೊರೆಯವರು ಆರೋಪ ಮಾಡಿರುವುದಲ್ಲದೆ, ದೂರು ಸಹ ದಾಖಲಿಸಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಬಾಲಕಿಯ ಮರಣವು ನೋಂದಣಿ ಆಗಿಲ್ಲ ಮತ್ತು ಆತುರವಾಗಿ ಬಾಲಕಿಯ ಮೃತದೇಹವನ್ನು ಅವರ ತೋಟದಲ್ಲಿ ಹೂಳಲಾಗಿದೆ ಎಂದು ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಇದಾದ ಬಳಿಕ ಪೊಲೀಸ್​ ಮತ್ತು ವಿಧಿವಿಜ್ಞಾನ ತಂಡ ತೋಟಕ್ಕೆ ತೆರಳಿ, ಬಾಲಕಿ ಹೂತಿದ್ದ ಹಾಗದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಪಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತ ಬಾಲಕಿಯ ತಂದೆ ಭವೇಶ್​ ಸೂರತ್​ನಲ್ಲಿ ಉದ್ಯಮವೊಂದನ್ನು ನಡೆಸುತ್ತಿದ್ದಾರೆ. ಬಾಲಕಿ ಆರು ತಿಂಗಳ ಹಿಂದೆ ಸೂರತ್​ನಲ್ಲಿ ಓದುತ್ತಿದ್ದಳು. ಯಾವುದೇ ಕಾರಣವಿಲ್ಲದೆ, ತಮ್ಮ ಮಗಳ ವಿದ್ಯಾಭ್ಯಾಸವನ್ನು ಪಾಲಕರು ಮೊಟಕುಗೊಳಿಸಿದ್ದರು. ಇದಾದ ಬಳಿಕ ಬಾಲಕಿಯನ್ನು ಮನೆಗೆ ಕರೆತರಲಾಗಿತ್ತು. ಮಗಳು ಮತ್ತೆ ಜನಿಸುತ್ತಾಳೆ ಮತ್ತು ಭಾರಿ ಸಂಪತ್ತು ಗಳಿಸಬಹುದು ಅಂತಾ ಮೂಡನಂಬಿಕೆಗೆ ಕಟ್ಟುಬಿದ್ದು ಮಗಳನ್ನು ನವರಾತ್ರಿಯ ದಿನ ಬಲಿ ಕೊಟ್ಟಿದ್ದಾರೆ. ಬಳಿಕ ನಾಲ್ಕು ದಿನಗಳವರೆಗೆ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡು, ನಂತರ ತಮ್ಮ ತೋಟದಲ್ಲಿ ಹೂತಿಟ್ಟಿದ್ದರು ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.

ಸದ್ಯ ಬಂಧಿಕ ಪಾಲಕರನ್ನು ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net