More

    ಕಾಳಸಂತೇಲಿ ಬಡವರ ಅಕ್ಕಿ

    ಹರೀಶ್ ಬೇಲೂರು ಬೆಂಗಳೂರು/ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ಸೋರಿಕೆ ಬಗ್ಗೆ ವಿಜಯವಾಣಿ ಮುಖಪುಟದಲ್ಲಿ ‘ಬಡವರ ಅನ್ನಕ್ಕೆ ಕಳ್ಳರ ಕನ್ನ’ ವಿಶೇಷ ವರದಿ ಆಹಾರ ಇಲಾಖೆಯ ಕಣ್ತೆರೆಸಿದೆ. ರಾಜ್ಯಾದ್ಯಂತ ಗೋದಾಮು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಯಾಗದೆ ಸಂಗ್ರಹವಿರುವ ಆಹಾರ ಧಾನ್ಯಗಳ ಮಾಹಿತಿ ನೀಡುವಂತೆ ಇಲಾಖೆ ಆದೇಶಿಸಿದೆ.

    ಏತನ್ಮಧ್ಯೆ ಬರೀ 6 ತಿಂಗಳಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ರೆಡಿಯಾಗಿದ್ದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಪಡಿತರ ಜಪ್ತಿಯಾಗಿರುವ ವಿಚಾರ ಬಹಿರಂಗವಾಗಿದೆ. ಬಡವರ ಅನ್ನಕ್ಕೆ ಕನ್ನ ಹಾಕುತ್ತಿರುವ ಅಕ್ರಮದಲ್ಲಿ ಬಗೆದಷ್ಟೂ ಸ್ಪೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ.

    ವಿವಿಧ ಕಾರಣಗಳಿಂದಾಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಆಹಾರ ಧಾನ್ಯಗಳನ್ನು ಪಡೆದುಕೊಳ್ಳದಿರುವ ಆದ್ಯತಾ ವಲಯದ ಪಡಿತರ ಚೀಟಿ (ಬಿಪಿಎಲ್), ಅಂತ್ಯೋದಯ ಅನ್ನ ಯೋಜನೆ (ಎಎವೈ) ಚೀಟಿದಾರರು ಹಾಗೂ ಪ್ರತಿ ತಿಂಗಳು ಅವರ ಹೆಸರಿನಲ್ಲಿ ಬರುವ ಪಡಿತರ ಧಾನ್ಯಗಳನ್ನು ಯಾವ ರೀತಿ ಲೆಕ್ಕ ತೋರಿಸಲಾಗುತ್ತಿದೆ,

    ಗೋದಾಮುಗಳಿಂದ ಯಾವ ಯಾವ ನ್ಯಾಯಬೆಲೆ ಅಂಗಡಿಗಳಿಗೆ ಎಷ್ಟು ಪ್ರಮಾಣದ ಪಡಿತರ ಪೂರೈಕೆ ಮಾಡಲಾಗಿದೆ ಎಂಬುದರ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ರಾಜ್ಯಾದ್ಯಂತ 2022ರ ಏ.1ರಿಂದ ಸೆ.30ರವರೆಗೆ 21 ಕೋಟಿ ರೂ. ಮೌಲ್ಯದ ಪಡಿತರ ಧಾನ್ಯಗಳನ್ನು ಆಹಾರ ಜಾಗೃತಿ ಮತ್ತು ತನಿಖಾ ದಳ ಜಪ್ತಿ ಮಾಡಿದೆ. ಇದರಲ್ಲಿ 25,258 ಕ್ವಿಂಟಾಲ್ ಅಕ್ಕಿ, 18,053 ಕ್ವಿಂಟಾಲ್ ರಾಗಿ, 5,534 ಕ್ವಿಂಟಾಲ್ ಭತ್ತ, 5,577 ಕ್ವಿಂಟಾಲ್ ಜೋಳ ಸೇರಿ ಒಟ್ಟು 61,079 ಕ್ವಿಂಟಾಲ್ ಅಗತ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರೆ ಜಿಲ್ಲೆಗಳಿಗಿಂತ ಅತಿ ಹೆಚ್ಚು ಅನ್ನಭಾಗ್ಯ ಅಕ್ಕಿಯನ್ನು ಮೈಸೂರಿನಲ್ಲಿ ಜಪ್ತಿ ಮಾಡಲಾಗಿದೆ. ನಂತರದ ಸ್ಥಾನಗಳಲ್ಲಿ ಬೀದರ್, ಬಳ್ಳಾರಿ, ಬೆಳಗಾವಿ, ಕೋಲಾರ ಹಾಗೂ ಕೊಪ್ಪಳ ಜಿಲ್ಲೆಗಳು ಬರಲಿವೆ.

    ಒಟ್ಟು 363 ಕೇಸ್​ಗಳ ಪೈಕಿ 324 ಎಫ್​ಐಆರ್ ದಾಖಲಿಸಲಾಗಿದೆ. 462 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, 2021ರ ಫೆ.1ರಿಂದ 2022ರ ಮಾ.31ರವರೆಗೆ ರಾಗಿ, ಭತ್ತ, ಅಕ್ಕಿ, ನುಚ್ಚು ಅಕ್ಕಿ, ಗೋಧಿ, ಸಕ್ಕರೆ, ಜೋಳ, ಬೇಳೆ, ಬೇಳೆಕಾಳು ಸೇರಿ ಒಟ್ಟು 1.38 ಲಕ್ಷ ಕ್ವಿಂಟಾಲ್ ಜಪ್ತಿ ಮಾಡಲಾಗಿದೆ. ಇಷ್ಟಾದರೂ ಪಡಿತರ ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಇಲಾಖೆಯಲ್ಲಿ ಪ್ರಬಲ ಕಾನೂನು ಇಲ್ಲದಂತಾಗಿದೆ. ಈ ಕ್ರಮದಿಂದ ಪಡಿತರ ದುರ್ಬಳಕೆ ಸಂಬಂಧ ಸಾವಿರಾರು ಪ್ರಕರಣಗಳು ವರದಿಯಾಗಿ ಎಫ್​ಐಆರ್​ಗಳು ದಾಖಲಾಗಿದ್ದರೂ ಆರೋಪಿಗಳಿಗೆ ಸರಿಯಾಗಿ ಶಿಕ್ಷೆಯಾಗುತ್ತಿಲ್ಲ.

    ಸಾವಿರ ಕೋಟಿ ರೂ. ಉಳಿತಾಯ

    ಅನ್ನಭಾಗ್ಯ ಯೋಜನೆ ದುರ್ಬಳಕೆ ನಿಯಂತ್ರಣಕ್ಕೆ ತಂದರೆ ಬೊಕ್ಕಸಕ್ಕೆ ಬರೋಬ್ಬರಿ ಒಂದು ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಕೂಲಿ ಕಾರ್ವಿುಕರು, ಕಡು ಬಡವರು, ಮಧ್ಯಮ ವರ್ಗ, ವಿಧವೆಯರು, ಬುಡಕಟ್ಟು ಜನ ಹಾಗೂ ಅಂಗವಿಕಲರಿಗೆ ಮಾತ್ರ ಈ ಯೋಜನೆ ಬಳಕೆಯಾಗಬೇಕು. ಆದರೆ, ಕೆಲ ಆರ್ಥಿಕ ಸಬಲರು ಹಾಗೂ ಫಲಾನುಭವಿಗಳು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಇಲಾಖೆಗೆ ಸಾಕಷ್ಟು ದೂರುಗಳು ದಾಖಲಾಗುತ್ತಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್​ಎಫ್​ಎಸ್​ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04 ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿತ್ತು. ಪ್ರಸ್ತುತ 1,15,79,846 ಬಿಪಿಎಲ್, 23,89,794 ಎಪಿಎಲ್ ಹಾಗೂ 10,90,558 ಅಂತ್ಯೋದಯ ಸೇರಿ ಒಟ್ಟು 1,50,60,198 ಕಾರ್ಡ್​ಗಳಿವೆ.

    ಮಾಸಿಕ 2.17 ಲಕ್ಷ ಟನ್

    ಕೇಂದ್ರದ ಸಹಕಾರದೊಂದಿಗೆ ರಾಜ್ಯ ಸರ್ಕಾರ ಪಡಿತರ ವಿತರಿಸುತ್ತಿದೆ. ಕೇಂದ್ರವು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 30 ರಿಂದ 35 ರೂ.ಗೆ ಖರೀದಿಸಿ ಪ್ರತಿ ಕೆಜಿಗೆ 3 ರೂ.ನಂತೆ ಅಕ್ಕಿಯನ್ನು ರಾಜ್ಯಕ್ಕೆ ನೀಡುತ್ತಿದೆ. ಅಂದಾಜು 2.17 ಲಕ್ಷ ಟನ್ ಅಕ್ಕಿಯನ್ನು ಯೋಜನೆಯಡಿ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಫಲಾನುಭವಿಗಳು ಹಾಗೂ ಪಡಿತರ ಕಳ್ಳರು ಯೋಜನೆ ಅಕ್ಕಿಯನ್ನು ಕಳ್ಳಮಾರ್ಗದಲ್ಲಿ ಮಾರಾಟ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ.

    ಪಡಿತರ ಅಕ್ರಮ ಕುರಿತು ವಿಜಯವಾಣಿಯಲ್ಲಿ ಪ್ರಕಟವಾಗಿರುವ ವರದಿ ಆಧಾರದಲ್ಲಿ ಇಲಾಖೆಯ ತಾಲೂಕುಮಟ್ಟದ ಅಧಿಕಾರಿ, ಸಿಬ್ಬಂದಿ, ನ್ಯಾಯಬೆಲೆ ಅಂಗಡಿ, ಗೋದಾಮುಗಳ ಸಿಬ್ಬಂದಿಗೆ ಆಹಾರ ಧಾನ್ಯಗಳು ದುರುಪಯೋಗ ಆಗದಂತೆ ಎಚ್ಚರಿಕೆ ನೀಡಲಾಗಿದೆ. ವಿತರಣೆಯಾಗದೆ ಉಳಿದಿರುವ ಧಾನ್ಯಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

    | ಶ್ರೀಶೈಲ್ ಬಿ. ಕಂಕಣವಾಡಿ, ಆಹಾರ ಇಲಾಖೆ ಉಪನಿರ್ದೇಶಕ

    ಅನ್ನ ಭಾಗ್ಯ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ನಿರಂತರವಾಗಿ ದಾಳಿ ನಡೆಸಿ ಪಡಿತರ ಧಾನ್ಯಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಲಾಗುತ್ತಿದೆ. ಅಕ್ಕಿ ದುರ್ಬಳಕೆ ಸಂಬಂಧ ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.

    | ಜ್ಞಾನೇಂದ್ರ ಕುಮಾರ್​ಗಂಗ್ವಾರ್, ಆಹಾರ ಇಲಾಖೆಯ ಸಕ್ಷಮ ದಳ ಮತ್ತು ಐಟಿ ವಿಭಾಗದ ಅಪರ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts