

ತಿರುವನಂತಪುರಂ: ಸೂಪರ್ ಹೀರೋ ಕಲ್ಪನಾ ಆಧಾರಿತ ಮಲಯಾಳಂನ ಯಶಸ್ವಿ ಚಿತ್ರ "ಮಿನ್ನಲ್ ಮುರಳಿ"ಯಿಂದ ಪ್ರಭಾವಿತಗೊಂಡಿರುವ ಯುವಕನೊಬ್ಬ ಚಿತ್ರದಲ್ಲಿ ನಾಯಕ ಟೋವಿನೋ ಥಾಮಸ್ ಧರಿಸಿದ್ದ ಸೂಪರ್ ಹೀರೋ ಉಡುಗೆಯನ್ನೇ ಧರಿಸಿ, ವಿಭಿನ್ನವಾಗಿ ಮದುವೆ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ವರನನ್ನು ಅಮಲ್ ರವೀಂದ್ರನ್ ಎಂದು ಗುರುತಿಸಲಾಗಿದೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ರವೀಂದ್ರನ್, ಕೊನೆಗೂ ಮಿನ್ನಲ್ ಮುರಳಿ ಮತ್ತು ಸೂಪರ್ ವುಮೆನ್ ಮದುವೆ ಮಾಡಿಕೊಂಡರು ಎಂದು ಬರೆದುಕೊಂಡಿದ್ದಾರೆ.
ವಧು ಸಾಂಪ್ರದಾಯಿಕ ಉಡುಗೆಯಲ್ಲಿದ್ದರೆ, ವರ ರವೀಂದ್ರನ್ ಸೂಪರ್ ಹೀರೋ ಧರಿಸು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆರೆದ ಮೈದಾನದಲ್ಲಿ ವಧು-ವರ ಹಾರ ಬದಲಾವಣೆ ಮಾಡಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ವಿಡಿಯೋ ಸೆರೆಹಿಡಿಯಲಾಗಿದೆ. ನವಜೋಡಿ ಮೈದಾನದಲ್ಲಿ ಓಡಾಡಿರುವ ದಶ್ಯವೂ ವೈರಲ್ ವಿಡಿಯೋದಲ್ಲಿದೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ವರ ರವೀಂದ್ರನ್, ಶೂಟ್ ಮಾಡಿದ ಬಳಿಕ ನಮ್ಮ ಸಂಬಂಧಿಕರು ಈ ಉಡುಗೆಯಲ್ಲಿ ನನ್ನನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಈ ಸೂಪರ್ ಹೀರೋ ಉಡುಗೆಯನ್ನು ನನ್ನ ಸೋದರ ಸಂಬಂಧಿಯೊಬ್ಬರು ಮದುವೆ ಸಂದರ್ಭದಲ್ಲಿ ಧರಿಸಲು ಪ್ಲಾನ್ ಮಾಡಿದ್ದರು. ಆದರೆ, ಕೋವಿಡ್ ಕಾರಣದಿಂದಾಗಿ ಅವರು ಮದುವೆಗೆ ಬರಲು ಆಗಲಿಲ್ಲ. 'ಸೇವ್ ದಿ ಡೇಟ್' ವೀಡಿಯೋ ನೋಡಿದ ನಂತರ ಅನೇಕರು ಮದುವೆಯ ಬಗ್ಗೆ ಕುತೂಹಲ ಹೊಂದಿದ್ದರು ಎಂದು ತಿಳಿಸಿದ್ದಾರೆ. ಅಂದಹಾಗೆ ಇಬ್ಬರು ಜನವರಿ 23ರಂದು ಸಪ್ತಪದಿ ತುಳಿದಿದ್ದಾರೆ.
ಇದೀಗ ಈ ವಿಡಿಯೋವನ್ನು ಅನೇಕರು ನಟ ಟೋವಿನೋ ಥಾಮಸ್ಗೆ ಟ್ಯಾಗ್ ಮಾಡುತ್ತಿದ್ದಾರೆ. ಅಲ್ಲದೆ, ಈ ವಿಭಿನ್ನ ವೆಡ್ಡಿಂಗ್ ಫೋಟೋಶೂಟ್ ಪರಿಕಲ್ಪನೆಗೆ ಫಿದಾ ಆಗಿದ್ದಾರೆ. (ಏಜೆನ್ಸೀಸ್)