ದೇವಸ್ಥಾನ ಗೋಪುರದ ಫೋಟೋ ಪೋಸ್ಟ್​ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮ್​ಚರಣ್​ ಪತ್ನಿ ಉಪಾಸನ!

Upasana
Published on

ಹೈದರಾಬಾದ್​: ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಸೊಸೆ ಹಾಗೂ ಸೂಪರ್​ಸ್ಟಾರ್​ ರಾಮ್​ಚರಣ್​ ಪತ್ನಿ ಉಪಾಸನ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅಪೊಲೋ ಚಾರಿಟಿಯ ಉಪಾಧ್ಯಕ್ಷೆಯಾಗಿರುವ ಉಪಾಸನ ನಿನ್ನೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಟ್ವಿಟ್ಟರ್​ನಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದರು. ದೇವಸ್ಥಾನ ಗೋಪುರದ ಫೋಟೋವನ್ನು ಪೋಸ್ಟ್​ ಮಾಡಿ ಅದರಲ್ಲಿ ರಾಮ್​ಚರಣ್​ ಮತ್ತು ತನ್ನನ್ನು ಗುರುತಿಸುವಂತೆ ಅಭಿಮಾನಿಗಳನ್ನು ಕೇಳಿದ್ದರು. ಆದರೆ, ಈ ಪೊಸ್ಟ್​ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ.

ಪೋಸ್ಟ್​ ಮಾಡಿರುವ ಉಪಾಸನ, ಈ ಚಿತ್ರಕ್ಕೊಂದು ಅಡಿಬರಹ ನೀಡಿ. ಅಡೆತಡೆಗಳಿಲ್ಲದೆ ಸಕ್ರಿಯ ಒಳಗೊಳ್ಳುವಿಕೆ ಮತ್ತು ಸೇರ್ಪಡೆಯ ಮೂಲಕ ಪ್ರಗತಿಶೀಲ, ಹೆಚ್ಚು ಸಹಿಷ್ಣು ರಾಷ್ಟ್ರವನ್ನು ನಿರ್ಮಿಸಲು ನಾವು ತೊಡಗಿಸಿಕೊಳ್ಳೋಣ. ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು ಎಂದು ಬರೆದಿರುವ ಉಪಾಸನ ಕೊನೆಯಲ್ಲಿ ಈ ಚಿತ್ರದಲ್ಲಿ ರಾಮ್​ಚರಣ್​ ಮತ್ತು ನನ್ನು ಪತ್ತೆಹಚ್ಚಿ ಎಂದು ಹೇಳಿದ್ದಾರೆ.

ಉಪಾಸನಾ ಪೋಸ್ಟ್​ ಮಾಡಿದ್ದ ಗೋಪುರದ ಫೋಟೋದಲ್ಲಿ ದೇವರುಗಳ ಬದಲು ಕೆಲವ ವ್ಯಕ್ತಿಗಳ ಫೋಟೋಗಳು ಇವೆ. ಇದರಿಂದ ಅಸಮಾಧಾನಗೊಂಡಿರುವ ಕೆಲ ನೆಟ್ಟಿಗರು ಇದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಫೋಟೋವನ್ನು ತೆಗೆದು ಹಾಕುವಂತೆ ಒತ್ತಾಯ ಮಾಡಿದ್ದಾರೆ. ಆದರೆ, ಇದುವರೆಗೂ ಈ ಬಗ್ಗೆ ಉಪಾಸನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net