ಖತರ್ನಾಕ್​ ಲೇಡಿಯ ಒಂದೇ ಒಂದು ಮಾತಿಗೆ ಮರುಳಾಗಿ 80 ಲಕ್ಷ ರೂ. ನೀಡಿದವನಿಗೆ ಕಾದಿತ್ತು ಬಿಗ್​ ಶಾಕ್​!

Sridivya
Published on

ವಿಜಯವಾಡ​: ಪ್ರೀತಿಯ ಹೆಸರಲ್ಲಿ ಖತರ್ನಾಕ ಮಹಿಳೆಯೊಬ್ಬಳು ಯುವಕರನ್ನು ವಂಚಿಸಿ ಹಣ ದೋಚುತ್ತಿದ್ದ ಪ್ರಕರಣವೊಂದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಮಹಿಳೆಯನ್ನು ಶ್ರೀದಿವ್ಯಾ ಪ್ರೇಮಾ ಎಂದು ಗುರುತಿಸಲಾಗಿದೆ. ಈಕೆ ವಿಜಯವಾಡದ ಇಬ್ರಾಹಿಂಪಟ್ಟಣಂ ನಿವಾಸಿ. ಈಕೆ ಮೊಬೈಲ್​ ಶಾಪ್​ ಓನರ್​ ಒಬ್ಬರಿಗೆ ಬರೋಬ್ಬರಿ 80 ಲಕ್ಷ ರೂ. ಹಣವನ್ನು ಎಗಿರಿಸಿದ್ದು, ಹಣ ಕಳೆದುಕೊಂಡ ಸಂತ್ರಸ್ತ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.

ಸಂತ್ರಸ್ತ ಇಬ್ರಾಹಿಂಪಟ್ಟಣದ ಪೊಲೀಸ್​ ಠಾಣೆಯಲ್ಲಿ ಶ್ರೀದಿವ್ಯಾ ಮತ್ತು ಆಕೆಯ ಸೋದರ ಸಂಬಂಧಿ ವಿರುದ್ಧ ದೂರು ದಾಖಲಿಸಿದ್ದ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದು, ಶ್ರೀದಿವ್ಯಾಳ ಒಂದೊಂದೆ ಮುಖವಾಡ ಕಳಚಿ ಬೀಳುತ್ತಿದೆ. ಅನೇಕ ಯುವಕರಿಗೆ ಈಕೆ ವಂಚನೆ ಮಾಡಿದ್ದಾಳೆ. ಅದರಲ್ಲಿ ಹೋಟೆಲ್​ ಮಾಲೀಕ ಮತ್ತು ನಗರದ ಕಾರ್ಪೋರೇಟರ್​ ಮತ್ತು ಆತನ ಮಕ್ಕಳಿಗೂ ಶ್ರೀದಿವ್ಯಾ ಚಳ್ಳೇಹಣ್ಣು ತಿನ್ನಿಸಿದ್ದಾಳೆ.

ಇನ್ನು ಶ್ರೀದಿವ್ಯಾಗೆ ಈಗಾಗಲೇ ಮದುವೆಯಾಗಿದ್ದು, ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದಲೇ ಈ ಕೃತ್ಯಕ್ಕೆ ಇಳಿದಿದ್ದಾಳೆ. ಗಂಡನ ಸಹಾಯದಿಂದಲೇ ತನ್ನ ಕೆಲಸವನ್ನು ಸಾಧಿಸುತ್ತಿದ್ದಳು. ವಿಜಯವಾಡದಲ್ಲಿ ಸೆಲ್​ಫೋನ್​ ಶಾಪ್​ ನಡೆಸುತ್ತಿದ್ದ ಕೃಷ್ಣನ ಮೇಲೆ ಕಣ್ಣಿಟ್ಟಿದ್ದ ಶ್ರೀದಿವ್ಯಾ, ಆಗಾಗ ಮೊಬೈಲ್​ ಶಾಪ್​ಗೆ ಹೋಗುವ ಮೂಲಕ ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಳು. ಪ್ರೀತಿ ಮತ್ತು ಮದುವೆ ಹೆಸರಲ್ಲಿ ಆತನಿಂದ ಹಣ ಪಡೆದ ಬಳಿಕ ವಂಚನೆ ಎಸಗಿದ್ದಾಳೆ.

ತನ್ನ ಹೆಸರಿನಲ್ಲಿ ಇರುವ ತೋಟವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ನಮಗೆ ಅವಶ್ಯಕತೆ ಇರುವ ಹಣವನ್ನು ನೀಡಿದರೆ ನಿನ್ನ ಹೆಸರಿಗೆ ಬರೆಯುತ್ತೇವೆ ಎಂದು ಕೃಷ್ಣನನ್ನು ನಂಬಿಸಿದ್ದಾಳೆ. ಅದನ್ನು ನಂಬಿದ ಕೃಷ್ಣ 50 ಲಕ್ಷ ಹಣವನ್ನು ಬ್ಯಾಂಕ್​ನಲ್ಲಿ ಸಾಲ ಪಡೆದು ಅವಳಿಗೆ ನೀಡಿದ್ದಾನೆ. ಮತ್ತೆ 30 ಲಕ್ಷ ರೂ. ನಗದನ್ನು ನೀಡಿದ್ದಾನೆ. ಇದಾದ ಬಳಿಕ ಹಣವನ್ನು ತೆಗೆದುಕೊಂಡು ಶ್ರೀದಿವ್ಯಾ ನಾಪತ್ತೆಯಾಗಿದ್ದಾಳೆ. ಮೊಬೈಲ್​ ಕೂಡ ಸ್ವಿಚ್​ ಆಫ್​ ಮಾಡಿಕೊಂಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಸಂತ್ರಸ್ತ ಕೃಷ್ಣ ಠಾಣೆಯ ಮೆಟ್ಟಿಲೇರಿದ್ದಾನೆ.

ಅಂದಹಾಗೆ ಶ್ರೀದಿವ್ಯಾಗೆ ಉದ್ಯಮಿಗಳು, ಸರ್ಕಾರಿ ಗುತ್ತಿಗೆದಾರರು, ಸರ್ಕಾರಿ ಉದ್ಯೋಗಿಗಳೇ ಟಾರ್ಗೆಟ್​. ಪ್ರಖ್ಯಾತ ವಕೀಲರೊಬ್ಬರು ಸಹ ಈಕೆಯಿಂದ ವಂಚಿತರಾಗಿದ್ದಾರೆನ್ನಲಾಗಿದೆ. ಹೀಗಾಗಿ ಶ್ರೀದಿವ್ಯಾಳಿಂದ ಮೋಸ ಹೋದವರ ಪಟ್ಟಿಯನ್ನು ಪೊಲೀಸರು ರೆಡಿ ಮಾಡುತ್ತಿದ್ದಾರೆ. ಯಾರು ಮೋಸ ಹೋಗಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net