ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ ಆದರೆ… ಸಿಎಂ ವಿರುದ್ಧ ಆರ್​. ಅಶೋಕ ಗರಂ

ವಿಜಯವಾಣಿ (79)
Published on

ಬೆಂಗಳೂರು: ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡವೆಂದರೆ ನಿಕೃಷ್ಟ, ಕನ್ನಡ ನಾಡಿನ ಕಲೆ ಸಂಸ್ಕೃತಿ ಅಂದರೆ ಕನಿಷ್ಠ. ಸಿಎಂ

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ನಿಗಮ ಮಂಡಳಿಗಳಲ್ಲಿ, ಟೆಂಡರ್ ಕಿಕ್ ಬ್ಯಾಕ್​ಗಳಲ್ಲಿ ನೂರಾರು ಕೋಟಿ ಲೂಟಿ ಮಾಡಲು ದುಡ್ಡಿದೆ, ಆದರೆ ನಾಡಿನ ಹೆಮ್ಮೆಯ ಸಂಗೀತ ಸರಸ್ವತಿ ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಜ್ಞಾಪಕಾರ್ಥವಾಗಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗುರುಕುಲಕ್ಕೆ ವಾರ್ಷಿಕ 1.25 ಕೋಟಿ ರೂ. ಅನುದಾನ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಾಗ್ದಾಳಿ ನಡೆಸಿದರು.

"ಸಿಎಂ ಸಿದ್ದರಾಮಯ್ಯನವರೇ ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ, ಕಲಾತಂಡಗಳಿಗೆ ಧನ ಸಹಾಯಕ್ಕೆ ದುಡ್ಡಿಲ್ಲ. ರಾಜ್ಯ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ದುಡ್ಡಿಲ್ಲ ರಂಗಮಂದಿರ, ಬಯಲು ಮಂದಿರಗಳಿಗೆ ಹಣ ನೀಡುತ್ತಿಲ್ಲ, ಕನ್ನಡ-ಸಂಸ್ಕೃತಿ ಇಲಾಖೆಗೆ ನಿಗದಿ ಹಣ ನೀಡುತ್ತಿಲ್ಲ. ಕಲೆ ಮತ್ತು ಸಂಸ್ಕೃತಿಗೆ ಮೀಸಲು ಹಣವಿಲ್ಲ, ಕಲಾಸಂಘಗಳಿಗೂ ನೀಡುವುದಕ್ಕೂ ರೊಕ್ಕವಿಲ್ಲ. ಇದೇನಾ ನೀವು ನಮ್ಮ ನಾಡಿನ ಕಲೆ ಸಂಸ್ಕೃತಿಗೆ ಬೆಲೆ ನೀಡುವ ಪರಿ?" ಎಂದು ಕಿಡಿಕಾರಿದರು.

"ಚುನಾವಣೆ ಬಂದರೆ ಸಾಕು ಭಾಷೆಯ ವಿಷಯದಲ್ಲಿ ಕೀಳು ರಾಜಕಾರಣ ಮಾಡುವ ನೀವು ಕನ್ನಡದ ಕೆಲಸಕ್ಕೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ. ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ನೀಡಬೇಕಿದ್ದ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ನಿಮ್ಮ ಸರ್ಕಾರ ಮಾತೃಭಾಷೆಗೆ, ನಾಡಿನ ಸಂಸ್ಕೃತಿಗೆ ದ್ರೋಹ ಬಗೆದಿದೆ" ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net