

ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್ ವಸೂಲಿಯಾದ ನಂತರ ಸಿಐಡಿ, ಎಸ್ಐಟಿ ಎಲ್ಲ ತನಿಖೆಯನ್ನೂ ಕಾಂಗ್ರೆಸ್ ಸರ್ಕಾರ ಮರೆತಿದೆ. ಬೆದರು ಬೊಂಬೆಯಂತೆ ತನಿಖಾ ಆಯೋಗವನ್ನು ಬಳಸಿಕೊಳ್ಳಲಾಗುತ್ತಿದೆ, ಇನ್ನೊಂದೆಡೆ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ. ಹಳೇ ಬಿಲ್ ಬಾಕಿ ಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ..., ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಂತೆ ತನಿಖೆ ಮಾಡುತ್ತೇವೆ ಎಂದರು. ಹಾಗಾದರೆ, ಎಲ್ಲಿ ನಡೆಯಿತು ತನಿಖೆ? ತನಿಖೆ ಮಾಡಿ ಎಷ್ಟು ಜನರನ್ನು ಹಿಡಿದು ಹಾಕಿದ್ದಾರೆ? ಎಷ್ಟು ಜನರನ್ನು ಕಪು್ಪಪಟ್ಟಿಗೆ ಸೇರಿಸ ಲಾಯಿತು? ಕಮಿಷನ್ ರೇಟ್ ಫಿಕ್ಸ್ ಮಾಡುವ ಸಲುವಾಗಿ ತನಿಖೆಯ ಬೆದರುಬೊಂಬೆ ತೋರಿಸಿದರು. ಸರಾಗವಾಗಿ ಕಮಿಷನ್ ಬರಲು ಆರಂಭವಾದ ಮೇಲೆ ಎಸ್ಐಟಿ, ಸಿಐಡಿ... ಯಾವ ತನಿಖೆಯೂ ನಡೆಯುತ್ತಿಲ್ಲ ಎಂದು ಹರಿಹಾಯ್ದರು.
ವಿಜಯವಾಣಿ ಕಚೇರಿ ಯಲ್ಲಿ ನಡೆದ ಸಂವಾದದಲ್ಲಿ ಈ ಸಂಗತಿ ಪ್ರಸ್ತಾಪಿಸಿದ ಅಶೋಕ್, ‘ಐದು ಗ್ಯಾರಂಟಿ ಕೊಡುತ್ತೇವೆಂದರು.. ಅದು ಯಶಸ್ವಿ ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದಕ್ಕಾಗಿ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆಂದು ಬೇರೆ ರಾಜ್ಯದಲ್ಲಿ ಬಿಂಬಿಸಿಕೊಳ್ಳಲು ಇತರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಸ್ಥಗಿತ ಮಾಡಿದ್ದಾರೆ’ ಎಂದು ಟೀಕಿಸಿದರು.
ಸರ್ಕಾರದ ಬಳಿ ದುಡ್ಡಿಲ್ಲ. ಬಂದಿರುವ ಗ್ಯಾರಂಟಿ ಜನರಿಗೆ ತಲುಪಿದ ಖುಷಿ ಎಲ್ಲೂ ಕಾಣಿಸುತ್ತಿಲ್ಲ. ರಾಜಕೀಯ ಅಧಿಕಾರಕ್ಕಾಗಿ ರಾಜ್ಯ ಹಾಳಾದರೂ ಪರವಾಗಿಲ್ಲ, ಚುನಾವಣೆ ಗೆಲ್ಲಬೇಕು ಎಂಬ ಮನಸ್ಥಿತಿ ಈ ಹಿಂದಿನ ಯಾವ ಮುಖ್ಯಮಂತ್ರಿಯಲ್ಲೂ ಕಾಣಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡುವಂತಹ ಸರ್ಕಾರವನ್ನು ಈ ಜನ ಕಂಡಿಲ್ಲ ಎಂದು ಕಟು ಶಬ್ದಗಳಲ್ಲಿ ವ್ಯಾಖ್ಯಾನಿಸಿದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು ಹೇಳಿದ್ದನ್ನು ಕೇಳಿದ್ದೇನೆ. ಈ ವಿಚಾರವಾಗಿ ಸರ್ಕಾರಕ್ಕೆ ನೇರ ಸವಾಲು ಹಾಕುತ್ತೇನೆ. ಪ್ರಧಾನಿಯಾಗಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಇದ್ದರಲ್ಲ, ಅವರು ಒಂಭತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಯಾವ ಶೀರ್ಷಿಕೆಯಲ್ಲಿ ಎಷ್ಟು ಅನುದಾನ ಕೊಟ್ಟಿದ್ದರು? ನರೇಂದ್ರ ಮೋದಿಯವರ ಕಳೆದ ಒಂಭತ್ತು ವರ್ಷಗಳಲ್ಲಿ ಎಷ್ಟು ಅನುದಾನ ಬಂದಿದೆ ಎಂದು ಹೇಳಲಿ. ಕಾಂಗ್ರೆಸ್ ಅವಧಿಗಿಂತ ನಾಲ್ಕು ಪಟ್ಟು ಅಧಿಕ ಕೊಟ್ಟಿದ್ದಾರೆ ಮೋದಿ. ನನ್ನ ಬಳಿಯೂ ಅಂಕಿ-ಸಂಖ್ಯೆ ಇದೆ. ಇವರು ಹೇಳುವ ಕಥೆ ಕೇಳಲು ಯಾರೂ ಸಿದ್ಧರಿಲ್ಲ ಎಂದರು.
ಮೋದಿಯಿಂದಲೇ ಅಧಿಕ ನೆರವು: ಎನ್ಡಿಆರ್ಎಫ್ನಡಿ ಮನಮೋಹನ್ ಸಿಂಗ್ ಅವಧಿಯ ಎಂಟು ವರ್ಷಗಳಲ್ಲಿ 3,233 ಕೋಟಿ ರೂ. ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 11,603 ಕೋಟಿ ರೂ. ಬಂದಿದೆ. ಅಂದರೆ ಏನು ತಾರತಮ್ಯವಾಯಿತು? ಎಂದು ಆರ್. ಅಶೋಕ್ ಪ್ರಶ್ನಿಸಿದರು. ಕೇಂದ್ರದ ಅನುದಾನಗಳು ಬಿಹಾರಕ್ಕೆ ಜಾಸ್ತಿ ಕೊಡುತ್ತಿದ್ದಾರೆ, ಉತ್ತರ ಪ್ರದೇಶಕ್ಕೆ ಜಾಸ್ತಿ, ಕರ್ನಾಟಕಕ್ಕೆ ಅನ್ಯಾಯ ಎನ್ನುತ್ತಿದ್ದಾರೆ. ಇದನ್ನು ನಿಗದಿ ಮಾಡಿದವರು ಯಾರು? ಜನಸಂಖ್ಯೆ ಆಧಾರದಲ್ಲಿ ಕೊಡುವುದರಿಂದ ಈ ರೀತಿ ಆಗಿದ್ದಲ್ಲವೇ? ಮೊದಲಿಂದಲೂ ಅದೇ ರೀತಿ ವ್ಯವಸ್ಥೆ ಇದೆ. ಸಂವಿಧಾನ ಬದ್ಧವಾಗಿ ಒಪ್ಪಿದ್ದೇವೆ ಎಂದರು.
ಯಾರ ಅವಧಿಯಲ್ಲಿ ಎಷ್ಟು ಬಿಲ್ ಬಾಕಿ?: ಸಿದ್ದರಾಮಯ್ಯ 2018ರಲ್ಲಿ ಅಧಿಕಾರದಿಂದ ಕೆಳಗೆ ಇಳಿಯುವ ಕೊನೆಯ ಆರು ತಿಂಗಳಲ್ಲಿ ಎಷ್ಟು ಟೆಂಡರ್ ಕರೆದಿದ್ದರು ಲೆಕ್ಕ ಕೊಡಲಿ. ಅದಕ್ಕೇನು ದುಡ್ಡು ಇಟ್ಟು ಹೋಗಿದ್ದರೆ? ಎಂದು ಆರ್. ಅಶೋಕ ಪ್ರಶ್ನಿಸಿದರು. ಹಿಂದಿನ ಸರ್ಕಾರದ ಅವಧಿಯ ಬಾಕಿ ಬಿಲ್ಗಳನ್ನು ಮುಂದೆ ಬಂದ ಸರ್ಕಾರ ಬಿಡುಗಡೆ ಮಾಡುವುದು ಸಹಜ ಪ್ರಕ್ರಿಯೆ ಎಂದ ಅವರು, ಸಿದ್ದರಾಮಯ್ಯ ದೊಡ್ಡ ಹೊರೆ ಹೊರಿಸಿ ಅಧಿಕಾರ ಬಿಟ್ಟು ಹೋಗಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ 22 ಸಾವಿರ ಕೋಟಿ ರೂ. ಬಾಕಿ ಇತ್ತು. ನೀರಾವರಿ ಇಲಾಖೆಯದ್ದು ಇನ್ನೂ ಜಾಸ್ತಿ ಇತ್ತು. ಈಗ ಇಂಧನ ಇಲಾಖೆಯಲ್ಲಿ 25 ಸಾವಿರ ಕೋಟಿ ರೂ ಬಾಕಿ ಇದೆ. ಇದು, ಬಿಜೆಪಿ ಅವಧಿಯಲ್ಲಿ ಆದ ಬಾಕಿಯೇ? 4 ವರ್ಷದಲ್ಲಿ ಇಷ್ಟು ಬಾಕಿ ಉಳಿಯಿತೇ? ಎಂದು ಕುಟುಕಿದರು. ಸ್ವಾತಂತ್ರ್ಯ ಬಂದಾಗಿನಿಂದ ಬಿಜೆಪಿ ಸರ್ಕಾರ ನಡೆಸಿದ್ದು ಒಂಭತ್ತು ವರ್ಷ. ಅದರಲ್ಲಿ ನಾವು ಎಷ್ಟು ಬಿಲ್ ಬಾಕಿ ಇಟ್ಟಿರಬಹುದು? ಇವರ 60-70 ವರ್ಷದಲ್ಲಿ ಇವರು ಎಷ್ಟು ಬಿಲ್ ಬಾಕಿ ಇಟ್ಟಿದ್ದರು? ತುಲನೆ ಮಾಡಿದರೆ ಯಾರು ಎಷ್ಟು ಬಾಕಿ ಇಟ್ಟರೆಂದು ಗೊತ್ತಾಗುತ್ತದೆ. ಸಾಲದ ಪರಿಪಾಠ ಶುರುವಾಗಿದ್ದೂ ಯಾರಿಂದ ಎನ್ನುವುದು ತಿಳಿದಿದೆ ಎಂದು ಅಶೋಕ್ ಹೇಳಿದರು.
ಸಿದ್ದರಾಮಯ್ಯನವರೇ, ದ್ವೇಷ, ಮೋಸದ ರಾಜಕಾರಣ ಆರಂಭಿಸಿದಿರಿ. ಹೊಸ ಕಾಮಗಾರಿ ಮಾಡದೇ ಇದ್ದರೂ ಪರವಾಗಿಲ್ಲ, ನಡೆಯುತ್ತಿದ್ದ ಕೆಲಸಗಳೆಲ್ಲ ಹಣವಿಲ್ಲದೆ ಸ್ಥಗಿತಗೊಂಡಿವೆ. ನೀರಾವರಿ ಯೋಜನೆಗೆ ನಯಾಪೈಸೆ ಕೊಟ್ಟಿಲ್ಲ, ಕೃಷ್ಣೆ ಕಣ್ಣೀರು ಸುರಿಸುತ್ತಿದ್ದಾಳೆ.
| ಆರ್. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ