

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಹಾಗೂ 185 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಚಿವ ಬಿ. ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಹೊರಟಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
"ಸಿಎಂ ಸಿದ್ದರಾಮಯ್ಯನವರೇ ಈ ಹಗರಣದಲ್ಲಿ ದಲಿತರ ದುಡ್ಡು ಲೂಟಿಯಾಗಿರುವುದು ಒಂದು ಕಡೆಯಾದರೆ, ಒಬ್ಬ ಅಮಾಯಕ ಹಾಗು ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ. ಹತ್ತಾರು ಕಂಪನಿಗಳಿಗೆ ನೂರಾರು ಕೋಟಿ ರೂ. ಮೌಲ್ಯದ ಅಂತರರಾಜ್ಯ ಹಣ ವರ್ಗಾವಣೆ ನಡೆದಿರುವ ಈ ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ. ಹಗರಣವಿಷ್ಟು ಗಂಭೀರವಾಗಿದ್ದರೂ ಸಿಐಡಿ ತನಿಖೆ, ಎಸ್ಐಟಿ ತನಿಖೆ ಅಂತ ಕಾಲಹರಣ ಮಾಡಿ, ಕಡೆಗೆ ಪ್ರಕರಣವನ್ನು ಮುಚ್ಚಿ ಹಾಕುವ ನಿಮ್ಮ ಹುನ್ನಾರವನ್ನು ಅರಿಯದಷ್ಟು ಅಮಾಯಕರಲ್ಲ ಕರ್ನಾಟಕದ ಜನತೆ" ಎಂದಿದ್ದಾರೆ.
"ನಿಮ್ಮ ನಾಟಕವನ್ನು ಸಾಕು ಮಾಡಿ, ಈ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿ. ಮೃತ ಅಧಿಕಾರಿಯ ಕುಟುಂಬಕ್ಕೆ, ಪರಿಶಿಷ್ಟ ಪಂಗಡ ಸುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಭ್ರಷ್ಟ ಸಚಿವರಾದ ನಾಗೇಂದ್ರರನ್ನು ಸಂಪುಟದಿಂದ ಕಿತ್ತೊಗೆದು ನಿಮ್ಮ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳಿ" ಎಂದು ವ್ಯಂಗ್ಯವಾಡಿದ್ದಾರೆ.