ಡಿವೈಡರ್​ಗೆ ಡಿಕ್ಕಿ ಹೊಡೆದು ಟ್ರಕ್​​ಗೆ ಗುದ್ದಿದ ಆಂಬ್ಯುಲೆನ್ಸ್​: ಒಂದೇ ಕುಟುಂಬದ 6 ಮಂದಿ ಸೇರಿ ಏಳು ಸಾವು

Ambulence
Published on

ಲಖನೌ: ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರು ಬರುತ್ತಿದ್ದ ಟ್ರಕ್​ಗೆ ಗುದ್ದಿದ ಪರಿಣಾಮ ಆಂಬ್ಯುಲೆನ್ಸ್​ನಲ್ಲಿದ್ದ 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಮೃತರಲ್ಲಿ 6 ಮಂದಿ ಒಂದೇ ಕುಟುಂಬದವರು. ದೆಹಲಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇಂದು (ಮೇ.31) ಮುಂಜಾನೆ ತಮ್ಮ ಊರು ಪಿಲ್ಭಿಟ್​ಗೆ ಆಂಬ್ಯುಲೆನ್ಸ್​ನಲ್ಲಿ ಹಿಂದಿರುಗುವಾಗ​ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್​, ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಎದುರು ಬರುತ್ತಿದ್ದ ಟ್ರಕ್​​ಗೆ ಗುದ್ದಿದೆ. ಪರಿಣಾಮ ಚಾಲಕ ಹಾಗೂ ಒಂದೇ ಕುಟುಂಬದ 6 ಮಂದಿ ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ಸಂಬಂಧ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮೃತರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net