

ರಷ್ಯಾ-ಯೂಕ್ರೇನ್ ಸಮರವು ಭಾರತಕ್ಕೆ ಒಂದು ರೀತಿಯ ಸಂಕಟ ಹಾಗೂ ಸವಾಲನ್ನು ತಂದೊಡ್ಡಿದೆ. ಸಂಘರ್ಷ ವಲಯದಲ್ಲಿ ಸಾವಿರಾರು ಭಾರತೀಯರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಇಂಥ ಸನ್ನಿವೇಶದಲ್ಲಿ, ಯುದ್ಧ ವಲಯದಿಂದ ಭಾರತೀಯರನ್ನು ತುರ್ತಾಗಿ ತೆರವು ಮಾಡಿ ಸ್ವದೇಶಕ್ಕೆ ಕರೆತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿ ಪಾತ್ರ ವಹಿಸಿದ್ದಾರೆ.
ರಷ್ಯಾ-ಯೂಕ್ರೇನ್ ಯುದ್ಧ ಸ್ಪೋಟಗೊಂಡ ನಂತರ ಮೋದಿ ಒಂದು ನಿಮಿಷವನ್ನೂ ವ್ಯರ್ಥ ಮಾಡಲಿಲ್ಲ. ವಿದೇಶಾಂಗ ಹಾಗೂ ಇತರ ಸಚಿವಾಲಯಗಳನ್ನು ಕಾರ್ಯತತ್ಪರವಾಗುವಂತೆ ಮಾಡಿ ‘ಆಪರೇಷನ್ ಗಂಗಾ’ ಹೆಸರಿನ ತೆರವು ಕಾರ್ಯಾಚರಣೆಗೆ ಸನ್ನದ್ಧಗೊಳಿಸಿದರು.
ನವದೆಹಲಿಯಲ್ಲಿ ಆಪರೇಷನ್ ಗಂಗಾದ ಅಧಿಕಾರಿಗಳು ಯೂಕ್ರೇನ್ನ ಕಿಯೆವ್, ಲಿವಿವ್ ಮತ್ತು ರ್ಚೆನಿವ್ಸ್ಟ್ಸಿ ನಗರಗಳಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರು. ತೆರವು ಕಾರ್ಯಾಚರಣೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಪೋಲಂಡ್ನ ವಾರ್ಸಾ, ಶೆಹ್ಯಿನಿ-ಮೆಡಿಕಾ ಮತ್ತು ಕರ್ಕೆವೀಕ್ ಗಡಿ ಕ್ರಾಸಿಂಗ್ಗಳು, ಹಂಗೇರಿಯ ಝುಹೋನಿ/ಕಪ್ತೈಸಾ ಗಡಿ ಕ್ರಾಸಿಂಗ್, ಸ್ಲೊವಾಕ್ ಗಣರಾಜ್ಯದ ವೈಸ್ನೆನೆಮೆಕ್ ಗಡಿ ಹಾಗೂ ರೊಮಾನಿಯಾದ ಸುಕೇವಾ ಗಡಿಗಳಲ್ಲಿ ಕೂಡ ತಂಡಗಳನ್ನು ನಿಯೋಜಿಸಲಾಯಿತು.
ರಾಜತಾಂತ್ರಿಕ ಕೌಶಲಕ್ಕೆ ಯಶಸ್ಸು: ಮೋದಿಯವರ ತಕ್ಷಣದ ಸ್ಪಂದನೆ ಹಾಗೂ ರಾಜತಾಂತ್ರಿಕ ಕೌಶಲದಿಂದಾಗಿ ಕೇವಲ 48 ಗಂಟೆಯೊಳಗೆ ವಿದ್ಯಾರ್ಥಿಗಳ ಸಹಿತ 1,400 ಭಾರತೀಯರನ್ನು ಆರು ವಿಶೇಷ ವಿಮಾನಗಳಲ್ಲಿ ದೇಶಕ್ಕೆ ಕರೆ ತರಲಾಯಿತು. ಇಡೀ ತೆರವು ಕಾರ್ಯಾಚರಣೆಯ ವೆಚ್ಚವನ್ನು ಸರ್ಕಾರವೇ ಭರಿಸಿದೆ. ಪ್ರಧಾನಿಯವರು ತೆರವು ಕಾರ್ಯಾಚರಣೆಯ ಖುದ್ದು ಅವಲೋಕನ ನಡೆಸುತ್ತಿದ್ದಾರೆ.
ಯೂಕ್ರೇನ್ನ ನೆರೆಹೊರೆ ದೇಶಗಳಿಂದ ಭಾರತಕ್ಕೆ ಆಗಮಿಸಲು ಇನ್ನೂ ಸಾವಿರಾರು ಜನರು ಕಾಯುತ್ತಿದ್ದು ಭಾರತ ಸರ್ಕಾರ ತೆರವು ಕಾರ್ಯಾಚರಣೆ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಮುಂದಿನ ಐದು ದಿನಗಳಲ್ಲಿ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಇನ್ನಷ್ಟು ವಿಮಾನಗಳು ಸೇರ್ಪಡೆಯಾಗಲಿವೆ. ಭಾರತೀಯರ ತೆರವು ಕಾರ್ಯಾಚರಣೆ ಸಮನ್ವಯಕ್ಕಾಗಿ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರು ಯೂಕ್ರೇನ್ನ ನೆರೆಹೊರೆ ದೇಶಗಳಿಗೆ ಧಾವಿಸಿದ್ದಾರೆ.
ಬೆಳವಣಿಗೆ ಮೇಲೆ ಮೋದಿ ಕಣ್ಣು: ರಷ್ಯಾ-ಯೂಕ್ರೇನ್ ಬಿಕ್ಕಟ್ಟನ್ನು ಪ್ರಧಾನಿ ಮೋದಿ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವಂತೆ ಯೂಕ್ರೇನ್ನಲ್ಲಿರುವ ಭಾರತೀಯ ದೂತಾವಾಸಕ್ಕೆ ಅವರು ಸೂಚನೆ ನೀಡಿದ್ದಾರೆ. ದೂತಾವಾಸ ಕಚೇರಿ, ಯೂಕ್ರೇನ್ನಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹ ಕಾರ್ಯವನ್ನು ಜನವರಿಯಲ್ಲೇ ಆರಂಭಿಸಿತ್ತು. ರಾಜಧಾನಿ ಕಿಯೆವ್ನಲ್ಲಿರುವ ರಾಯಭಾರ ಕಚೇರಿ, ಯೂಕ್ರೇನ್ನಲ್ಲಿ ನೆಲೆಸಿರುವ 19,763 ಭಾರತೀಯರೊಂದಿಗೆ ಸಂಪರ್ಕ ಸಾಧಿಸಿದೆ.
ಸದ್ಯವೇ ಪರಿಸ್ಥಿತಿ ಬಿಗಡಾಯಿಸಬಹುದೆಂದು ಭಾರತೀಯ ದೂತಾವಾಸ ಫೆಬ್ರವರಿ 15ರಂದೇ ಅಲ್ಲಿ ನೆಲೆಸಿರುವ ಭಾರತೀಯರಿಗೆ ಸುಳಿವು ನೀಡಿತ್ತು. ಯೂಕ್ರೇನ್ನಲ್ಲಿನ ವಿದ್ಯಮಾನಗಳಿಗೆ ತಕ್ಷಣವೇ ಸ್ಪಂದಿಸಿದ ಭಾರತ, ಏರ್ ಬಬಲ್ ಮಿತಿಯನ್ನು ಹೆಚ್ಚಿಸಿ ಅದರನ್ವಯ ವಿಶೇಷ ವಿಮಾನಗಳ ಹಾರಾಟ ಆರಂಭಿಸಿತು. ಭಾರತೀಯರನ್ನು ಸುರಕ್ಷಿತವಾಗಿ ಕರೆ ತರುವುದಕ್ಕೆ ಆದ್ಯತೆ ನೀಡಲಾಗಿದೆ. ಕದನ ಆರಂಭವಾಗುವ ಒಂದು ದಿನದ ಮೊದಲು, ಅಂದರೆ ಫೆಬ್ರವರಿ 23ರೊಳಗೆ 4,000 ಭಾರತೀಯರು ಸ್ವದೇಶಕ್ಕೆ ಮರಳಿದ್ದರು.
ಭಾರತೀಯರ ಸುರಕ್ಷಿತ ವಾಪಸಾತಿ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲಂಡ್, ಹಂಗೇರಿ, ಸ್ಲೊವಾಕಿಯಾ ಮತ್ತು ರೊಮೇನಿಯಾದ ವಿದೇಶ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ‘ಸಮಯಕ್ಕಾದವನೇ ಗೆಳೆಯ’ ಎಂಬ ನಾಣ್ಣುಡಿ ಪ್ರಧಾನಿ ಮೋದಿ ವಿಚಾರದಲ್ಲಿ ಇನ್ನೊಮ್ಮೆ ಸಾಬೀತಾಗಿದೆ. ಹಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಯಶಸ್ವಿ ಕಾರ್ಯಾಚರಣೆಗಳನ್ನು ಅವರು ನಡೆಸಿದ್ದಾರೆ.
ಅಫ್ಘಾನಿಸ್ತಾನ, ಸಿರಿಯಾ ಮತ್ತು ಯೆಮೆನ್ ಬಿಕ್ಕಟ್ಟುಗಳ ಸಂದರ್ಭದಲ್ಲಿ ಸಾವಿರಾರು ಭಾರತೀಯರನ್ನು ಕರೆತರುವಲ್ಲಿ ವೋದಿ ನಾಯಕತ್ವ ಕಾರ್ಯ ನಿರ್ವಹಿಸಿದೆ. ಕೋವಿಡ್-19 ಸಾಂಕ್ರಾಮಿಕತೆ ಇಡೀ ಜಗತ್ತನ್ನೇ ಕಾಡಿದಾಗ ವಿವಿಧ ದೇಶಗಳಲ್ಲಿದ್ದ ಭಾರತೀಯರ ಪೈಕಿ ಸಾವಿರಾರು ಜನರನ್ನು ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಸ್ವದೇಶಕ್ಕೆ ಏರ್ ಲಿಫ್ಟ್ ಮಾಡಲಾಗಿತ್ತು. ವಿಶೇಷ ವಿಮಾನಗಳು 88,000 ಹಾರಾಟ ನಡೆಸಿ ಸುಮಾರು 70 ಲಕ್ಷ ಭಾರತೀಯರನ್ನು ಕರೆ ತಂದಿದ್ದವು. 2014ರಲ್ಲಿ ಇರಾಕ್ನಲ್ಲಿ ಐಸಿಸ್ ಭಯೋತ್ಪಾದಕರ ನಡುವೆ ಸಿಕ್ಕಿಹಾಕಿಕೊಂಡಿದ್ದ 46 ಭಾರತೀಯ ನರ್ಸ್ಗಳನ್ನು ಕರೆ ತಂದ ‘ಆಪರೇಷನ್ ಸಂಕಟ ವಿಮೋಚನ್’, ಯೆಮೆನ್ನಲ್ಲಿ ಸೌದಿ ಅರೇಬಿಯಾ ಹಾಗೂ ಮಿತ್ರದೇಶಗಳ ಮಿಲಿಟರಿ ಹಸ್ತಕ್ಷೇಪವಾದಾಗ 4,600 ಭಾರತೀಯರು ಮತ್ತು ಇತರ 11 ದೇಶಗಳ 950ಕ್ಕೂ ಅಧಿಕ ನಾಗರಿಕರನ್ನು ಪಾರು ಮಾಡಿದ ‘ಆಪರೇಷನ್ ರಾಹತ್’ ಮೊದಲಾದವು ಅವುಗಳಲ್ಲಿ ಪ್ರಮುಖವಾಗಿವೆ.
(ಲೇಖಕರು ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಿಭಾಗದ ಮುಖ್ಯಸ್ಥ)