

ಬಳ್ಳಾರಿ: ಅಪಾಯವನ್ನು ಅಂದಾಜಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಧಾವಿಸಿದ್ದರಿಂದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಳ್ಳಾರಿ ರೈಲು ನಿಲ್ದಾಣದಲ್ಲಿ ಇಂಥದ್ದೊಂದು ಪ್ರಕರಣ ಇಂದು ಬೆಳಗ್ಗೆ ನಡೆದಿದೆ.
ಗದಗಕ್ಕೆ ತೆರಳಬೇಕಿದ್ದ ಹರಿಪ್ರಿಯಾ ಎನ್ನುವ ಮಹಿಳೆಯೊಬ್ಬರು ಎಕ್ಸ್ಪ್ರೆಸ್ ಟ್ರೈನ್ ಚಲಿಸುತ್ತಿದ್ದಾಗಲೇ ಹತ್ತಲು ಯತ್ನಿಸಿ ಎಡವಟ್ಟು ಮಾಡಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಧಾವಿಸಿ ರಕ್ಷಿಸದೇ ಇದ್ದಿದ್ದರೆ ಪ್ರಾಣಾಪಾಯಕ್ಕೆ ಒಳಗಾಗಿರುತ್ತಿದ್ದರು.
ಮಹಿಳೆ ಚಲಿಸುವ ರೈಲು ಹತ್ತಲು ತೆರಳುತ್ತಿದ್ದುದನ್ನು ದೂರದಿಂದಲೇ ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಮಾರುತಿ ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು. ಅವರು ಊಹಿಸಿದ್ದಂತೆ ಆಕೆ ರೈಲನ್ನು ಹತ್ತುವಾಗ ಬಿದ್ದಿದ್ದು, ತಕ್ಷಣ ಅಲ್ಲಿಗೆ ತೆರಳಿದ ಇವರು ಹಿಡಿದು ಪಕ್ಕಕ್ಕೆ ಎಳೆಯದೇ ಇರುತ್ತಿದ್ದರೆ ರೈಲು-ಪ್ಲ್ಯಾಟ್ಫಾರ್ಮ್ ನಡುವಿಗ ಗ್ಯಾಪ್ನಲ್ಲಿ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಅಧಿಕವಿತ್ತು. ಮಾರುತಿಯ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.