ಗುಣಮಟ್ಟ ಹೆಚ್ಚಿದೆ

ವಿಜಯವಾಣಿ (3)
Published on
| ದೊಡ್ಡೇಗೌಡ, ಸಪ್ನಾ ಬುಕ್ ಹೌಸ್, ಬೆಂಗಳೂರು

ಆಧುನಿಕ ಜಗತ್ತಿನ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಈಗ ತುಂಬ ಒಳ್ಳೆಯ ಪ್ರಯತ್ನಗಳು ನಡೆಯುತ್ತಿವೆ. ಪುಸ್ತಕದ ವಿಷಯ ಮತ್ತು ಮುದ್ರಣದ ಗುಣಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿದ್ದೇವೆ. ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳ ಗುಣಮಟ್ಟದೊಂದಿಗೆ ಸ್ಪರ್ಧೆ ನಡೆದಿದೆ. ಹೊಸತನವೂ ಮೇಳೈಸಿದೆ. ಯುವಪೀಳಿಗೆಯ ಪ್ರಕಾಶಕರು ಒಳ್ಳೆಯ ರೀತಿಯಲ್ಲಿ ಆಲೋಚನೆ ಮಾಡಿ ಈಗಿನ ಮಾನದಂಡಗಳಿಗೆ ಅನುಗುಣವಾಗಿ ಪುಸ್ತಕ ಹೊರ ತರುತ್ತಿದ್ದಾರೆ. ಮುಖ್ಯವಾಗಿ, ಹೊಸ ಓದುಗರು, ಹೊಸ ಬರಹಗಾರರು ಸಿಗುತ್ತಿದ್ದಾರೆ. ಕರೊನಾ ನಂತರದಲ್ಲಿ ಓದುಗರ, ಬರೆಯುವವರ, ಪ್ರಕಾಶಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಹೊಸ ಓದುಗರು ಸೃಷ್ಟಿಯಾಗಿದ್ದರಿಂದ ಹೊಸ ಪ್ರಕಾಶಕರು, ಹೊಸ ಲೇಖಕರು ಹುಟ್ಟಿಕೊಂಡಿದ್ದಾರೆ. ಹೀಗಿರುವಾಗ ಕನ್ನಡ ಸಾಹಿತ್ಯ ಸಂಪತ್ತನ್ನು ಅನ್ಯ ಭಾಷಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಹೆಚ್ಚಬೇಕಿದೆ. ಕನ್ನಡ ಪುಸ್ತಕಗಳು ಭಾರತದ ಬೇರೆ ಬೇರೆ ಪ್ರಾದೇಶಿಕ ಭಾಷೆಗಳಲ್ಲಿ ಬರಬೇಕು. ಪುಸ್ತಕವನ್ನು ನೇರವಾಗಿ ಓದುಗನವರೆಗೆ ತಲುಪಿಸುವ ಜವಾಬ್ದಾರಿ ಪ್ರಕಾಶಕನದ್ದು. ಆದರೆ, ಲೇಖಕರು ಕೂಡ ಇದರಲ್ಲಿ ಕೈಜೋಡಿಸಬೇಕಾಗುತ್ತದೆ. ರಾಜ್ಯದ ಎಲ್ಲ ಭಾಗಗಳಿಗೆ ಅಂದರೆ ತಾಲೂಕು, ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು. ಕನ್ನಡ ಪುಸ್ತಕ ಪ್ರಾಧಿಕಾರ ಎಲ್ಲ ಜಿಲ್ಲೆಗಳಲ್ಲಿ ‘ಸಿರಿಗನ್ನಡ’ ಮಳಿಗೆ ತೆರೆದಿತ್ತು. ಅದನ್ನು ಮತ್ತೆ ಪುನರ್ ಜೀವನಗೊಳಿಸಬೇಕು.

ಪುಸ್ತಕದಂಗಡಿಗಳಿಗೆ ಯುವಕರು ಆಸಕ್ತಿಯಿಂದ ಬರುತ್ತಿದ್ದಾರೆ. ಇದಕ್ಕೆ ನಾನೇ ಪ್ರತ್ಯಕ್ಷದರ್ಶಿ. ಈ ಯುವಕರನ್ನು ಸಾಹಿತ್ಯ ಚಟುವಟಿಕೆಗಳಲ್ಲೂ ತೊಡಗಿಸಬೇಕು. ಕಮ್ಮಟ, ಕಥಾಸ್ಪರ್ಧೆ, ಕವಿಗೋಷ್ಠಿಗಳ ಆಯೋಜನೆ ಮೂಲಕವೂ ಓದುಗರನ್ನು ತಲುಪಬೇಕು. ಆ ದಿನಗಳಿಗೂ ಈ ದಿನಗಳಿಗೂ ನೋಡಿದಾಗ ತುಂಬ ವ್ಯತ್ಯಾಸ ಇದೆ. ಯುವ ಲೇಖಕರು, ಪ್ರಕಾಶಕರ ಸಂಖ್ಯೆ ಹೆಚ್ಚಿದೆ. ಮನೆಯಲ್ಲೇ ಸಣ್ಣ ಗ್ರಂಥಾಲಯ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಕುವೆಂಪು, ಬೇಂದ್ರೆ, ಕಾರಂತ, ತೇಜಸ್ವಿ, ತರಾಸು, ಎಂಕೆ ಇಂದಿರಾ ಅವರ ಕೃತಿಗಳಿಗೆ ಭಾರಿ ಬೇಡಿಕೆ ಇದೆ. ಇದಲ್ಲದೆ, ವ್ಯಕ್ತಿತ್ವ ವಿಕಸನ, ಮಕ್ಕಳ ಸಾಹಿತ್ಯ ಮತ್ತು ಆರೋಗ್ಯ ಕ್ಷೇತ್ರದ ಪುಸ್ತಕಗಳಿಗೆ ಬೇಡಿಕೆ ಇದೆ.

ನಾವು ಕೇಳಿದ ಮೂರು ಪ್ರಶ್ನೆಗಳು

1) ಪ್ರಸ್ತುತ ಕಾಲಘಟ್ಟದಲ್ಲಿ ಪ್ರಕಾಶನ ಎಂಬುದು ಹೊಸತನ ಅಳವಡಿಸಿಕೊಂಡು ಉತ್ಸಾಹದಿಂದ ಮುಂದಡಿ ಇಡುತ್ತಿದೆ. ವಿಶಿಷ್ಟ ಕೃತಿಗಳು ಅನಾವರಣಗೊಳ್ಳುತ್ತಿವೆ. ಹೀಗಿರುವಾಗ ಸವಾಲು ಮತ್ತು ಅವಕಾಶಗಳೇನು?

2) ವಿಶಿಷ್ಟ ಕೃತಿಗಳು ಬಂದರೂ ಅದನ್ನು ಕಟ್ಟಕಡೆಯ ಓದುಗನವರೆಗೆ ತಲುಪಿಸುವ ಪೂರೈಕೆ ಕೊಂಡಿ ಇಂದಿಗೂ ದುರ್ಬಲವಾಗಿದೆ. ಪ್ರಕಾಶನ ಉದ್ಯಮ ಒಟ್ಟಾಗಿ ಈ ಕೊರತೆಯನ್ನು ಹೇಗೆ ನಿವಾರಿಸಬಹುದು?

3) ಟ್ರೆಂಡ್ ಬದಲಾಗಿದೆ. ಇಂಗ್ಲಿಷ್ ಸಾಹಿತ್ಯೋವಗಳಂತೆ ಕನ್ನಡ ಸಾಹಿತ್ಯೋತ್ಸವಗಳಲ್ಲಿ ಯುವಕರ ಸಹಭಾಗಿತ್ವ ಹೆಚ್ಚುತ್ತಿರುವುದು ಸಕಾರಾತ್ಮಕ ಬದಲಾವಣೆ. ಈ ಹೊಸ ಓದುಗರನ್ನು ಹೇಗೆ ತಲುಪುತ್ತೀರಿ ಮತ್ತು ಯಾವ ಪ್ರಕಾರದ ಕೃತಿಗಳಿಗೆ ಹೆಚ್ಚಿನ ಬೇಡಿಕೆ ಇದೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net