‘ಇವನ ಮುಖ ನೋಡಲು ಹಣ ಕೊಟ್ಟು ಚಿತ್ರಮಂದಿರಕ್ಕೆ ಹೋಗ್ಬೇಕಾ’? ಈ ಚುಚ್ಚು ಮಾತು ಕೇಳಿದ್ದ ನಟ ಇಂದು ಸೂಪರ್​ಸ್ಟಾರ್​ | Star Actor

ವಿಜಯವಾಣಿ (52)
Published on

Star Actor: ಚಿತ್ರರಂಗ ಅಂದಮೇಲೆ ಈ ರೀತಿಯ ಅನುಭವಗಳು ಅನೇಕ ನಟ-ನಟಿಯರಿಗೆ ಎದುರಾಗಿರುತ್ತದೆ. ಅಂತಹ ಹಲವಾರು ನಿದರ್ಶನಗಳು ಇಂದು ನಮ್ಮ ನಿಮ್ಮೆಲರ ಮುಂದಿದೆ. ಚೊಚ್ಚಲ ಚಿತ್ರದಲ್ಲಿ ನಟನಾಗಿ ಹೊರಹೊಮ್ಮುವ ಆಸೆಯನ್ನು ಹೊತ್ತುಕೊಂಡು ಬರುವ ಅದೆಷ್ಟೋ ಕಲಾವಿದರು ಕೆಲವರು ಹಿಯಾಳಿಸುವ ರೀತಿಗೆ ಕುಸಿದು, ಆ ವೃತ್ತಿಯಿಂದ ಹೊರನಡೆದು, ತಮ್ಮ ಕನಸನ್ನೇ ಮೊಟಕುಗೊಳಿಸುತ್ತಾರೆ. ಇನ್ನು ಕೆಲವರು ಎಷ್ಟೇ ಚುಚ್ಚಿ ಮಾತನಾಡಿದರು, ಕುಗ್ಗಿಸಲು ಪ್ರಯತ್ನಿಸಿದರು, ಅದಕ್ಕೆ ಜಗ್ಗದೆ ತಮ್ಮ ಸಾಧನೆ ಮುಖೇನ ಉತ್ತರಿಸುತ್ತಾರೆ.

ಅದೇ ರೀತಿಯಲ್ಲಿ ಇಲ್ಲೊಬ್ಬ ಸ್ಟಾರ್​ ನಟ ತಮ್ಮ ಪ್ರಾರಂಭದ ದಿನಗಳಲ್ಲಿ ನೋಡಿದ ಕಷ್ಟದ ದಿನಗಳನ್ನು ಅವರ ಸ್ನೇಹಿತರೊಬ್ಬರು ನೇರವಾಗಿ ಕಂಡಿದ್ದು, ಅದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ಸೂಪರ್​ಸ್ಟಾರ್? ಇವರು ಯಾವ ಚಿತ್ರರಂಗದವರು? ಈ ಘಟನೆಗಳನ್ನು ಮುಕ್ತವಾಗಿ ತಿಳಿಸಿದ ಅವರ ಸ್ನೇಹಿತರು ಯಾರು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಈ ಹಿಂದೆ ‘ಮಾರ್ಕ್​ ಆ್ಯಂಟನಿ’ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ತಮಿಳು ನಟ ವಿಶಾಲ್​, ತಮ್ಮ ಆಪ್ತ ಸ್ನೇಹಿತರಾದ ಕಾಲಿವುಡ್​​ನ ದಳಪತಿ ವಿಜಯ್​ ಅವರ ಕಷ್ಟದ ದಿನಗಳನ್ನು ಮೆಲುಕು ಹಾಕಿದರು. “ನಾನು ವಿಜಯ್​ ಅವರನ್ನು ಕಾಲೇಜು ದಿನಗಳಿಂದಲೂ ನೋಡಿದ್ದೇನೆ. ಯಾಕಂದ್ರೆ, ಕಾಲೇಜಿನಲ್ಲಿ ವಿಜಯ್​ ನನ್ನ ಸಹೋದರನ ಸೀನಿಯರ್​ ಆಗಿದ್ದರು. ಹಾಗಾಗಿ ಅಂದಿನಿಂದಲೂ ಅವರ ಜೀವನದ ಗ್ರಾಫ್​ ಹೇಗಿತ್ತು ಎಂಬುದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು.

“ವಿಜಯ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಒಂದು ಪ್ರತ್ಯೇಕ ಮ್ಯಾಗ್​ಜೀನ್​ ಅವರ ಬಗ್ಗೆ ಕೆಟ್ಟದಾಗಿ ಬರೆದಿತ್ತು. ಇವನ ಮುಖ ನೋಡಲು ಚಿತ್ರಮಂದಿರಕ್ಕೆ ಹಣ ಕೊಟ್ಟು ಹೋಗಬೇಕಾ? ಎಂದು ವ್ಯಂಗ್ಯವಾಡಿತ್ತು. ಆದ್ರೆ, ಇದಕ್ಕೆ ತಲೆಕಡಿಸಿಕೊಳ್ಳದ ವಿಜಯ್​, ತನ್ನ ಕೆಲಸಗಳನ್ನು ಮುಂದುವರೆಸಿ, ಹಲವಾರು ಸಿನಿಮಾಗಳನ್ನು ಮಾಡಿದರು” ಎಂದಿದ್ದಾರೆ.

“ಸತತ ಸಿನಿಮಾಗಳನ್ನು ಮಾಡಿದ ಬಳಿಕ ಅದೇ ಮ್ಯಾಗ್​ಜೀನ್​ನವರು, ವಿಜಯ್​ ಬಗ್ಗೆ ಪಾಸಿಟಿವ್ ಆಗಿ​ ಬರೆದರು. ಇದು ದಳಪತಿ ವಿಜಯ್​ ಅವರ ಯಶಸ್ಸು. ಇಷ್ಟು ವರ್ಷಗಳಿಂದ ನೋಡಿರುವಂತೆ ಅವರು ಏಣಿಯನ್ನು ಹಂತ ಹಂತವಾಗಿ ಹತ್ತಿಕೊಂಡು ಮತ್ತಷ್ಟು ಎತ್ತರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ” ಎಂದು ವಿಶಾಲ್​ ತಮ್ಮ ಗೆಳಯ ವಿಜಯ್ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net