ಕಮಲ್ ಹಾಸನ್ ಮೋಡಿ: ಜೂನ್ 5ಕ್ಕೆ ತೆರೆ ಮೇಲೆ ಬರಲಿದೆ ‘ಥಗ್‌ಲೈಫ್​’ ಸಿನಿಮಾ

kamal hasaan
Published on

ಚೆನ್ನೈ: ಮೂರುವರೆ ದಶಕಗಳ ಬಳಿಕ ನಟ ಕಮಲ್ ಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ಥಗ್‌ಲೈಫ್​’ ಸಿನಿಮಾದ ಮೂಲಕ ಒಂದಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ 1987ರಲ್ಲಿ ‘ನಾಯಕನ್’ ಚಿತ್ರ ತೆರೆಕಂಡಿತ್ತು. ಇದೀಗ, ಮಣಿರತ್ನಂ ಹೊಸ ಕಥೆಯೊಂದಿಗೆ ಮತ್ತೆ ಬಂದಿದ್ದಾರೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿದ್ದ ಸಿನಿಮಾವು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಜೂನ್ 5ರಂದು ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರದ ಮೊದಲು ಹಾಡು ಬಿಡುಗೊಳಿಸಲಾಯಿತು. ‘ಜಿಂಗುಚ್ಚಾ’ ಎಂದು ಸಾಗುವ ಚಿತ್ರದ ಹಾಡನ್ನು ನಟ ಕಮಲ್ ಹಾಸನ್ ರಚಿಸಿದ್ದು, ‘ಆಸ್ಕರ್’ ವಿಜೇತ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ವೈಶಾಲಿ ಸಾಮ್ರಾಟ್, ಶಕ್ತಿಶ್ರೀ ಗೋಪಾಲನ್, ಆದಿತ್ಯ ಆರ್.ಕೆ. ಧ್ವನಿಯಾಗಿದ್ದಾರೆ. ಹಾಡು ಬಿಡುಗಡೆಗೊಳಿಸಿದ ಬಳಿಕ ನಟ ಕಮಲ್ ಹಾಸನ್, ‘ನಾವು ಭಾರತಕ್ಕಾಗಿ ಸಿನಿಮಾ ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ಭಾಷೆಯ ಗಡಿ ಇಲ್ಲ. ದೊಡ್ಡ ಕನಸಿನೊಂದಿಗೆಯೇ ಬಜೆಟ್ ಹಾಗೂ ಮಾರುಕಟ್ಟೆಯನ್ನು ಅರಿತುಕೊಂಡೇ ಸಿನಿಮಾ ಮಾಡುತ್ತಿದ್ದೇವೆ. 38 ವರ್ಷಗಳಿಂದಲೂ ನನ್ನ ಹಾಗೂ ಮಣಿ ವಿಷಯದಲ್ಲಿ ಯಾವುದೂ ಬದಲಾವಣೆಯಾಗಿಲ್ಲ. ಇಬ್ಬರು ಎಲ್ಡಮ್ಸ್ ರಸ್ತೆಯಲ್ಲಿ ಸೇರಿ ಬಹುತೇಕ ಸಿನಿಮಾ ಕುರಿತೇ ಮಾತನಾಡುತ್ತೇವೆ. ಆದರೆ, ಆ ವಿಚಾರಗಳನ್ನು ಚಿತ್ರದಲ್ಲಿ ತರಲು ಸಾಧ್ಯವಾಗಿಲ್ಲ. ಮುಂದೊಂದು ದಿನ ತರಬಹುದು ಎಂಬ ಆಲೋಚನೆ ಇದ್ದೇ ಇದೆ’ ಎಂದು ಹೇಳಿದರು. ಕಮಲ್ ಹಾಸನ್ ಸೇರಿ ತ್ರಿಷಾ, ಸಿಲಂಬರಸನ್ ಟಿ.ಆರ್., ಅಶೋಕ್ ಸೆಲ್ವನ್, ಐಶ್ವರ್ಯಾ ಲಕ್ಷ್ಮೀ, ಜೋಜು ಜಾರ್ಜ್, ಅಭಿರಾಮಿ, ನಾಸರ್ ಕಲಾ ಬಳಗದಲ್ಲಿದ್ದಾರೆ. ರವಿ ಆರ್.ಚಂದ್ರನ್ ಛಾಯಾಗ್ರಹಣ ಚಿತ್ರಕ್ಕಿದೆ.

ತಪ್ಪು ನಮ್ಮದೇ: 38 ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಜತೆಯಾಗಿದ್ದಾರೆ. ಆದರೆ, ಇಷ್ಟು ವರ್ಷಗಳ ಕಾಲ ಇಬ್ಬರು ಯಾಕೆ ಕೂಡಿ ಕೆಲಸ ಮಾಡಲಿಲ್ಲ ಎಂಬ ಪ್ರಶ್ನೆಗೆ ಕಮಲ್ ಉತ್ತರಿಸಿದ್ದು, ‘ಇಷ್ಟು ದಿನ ಒಟ್ಟಿಗೆ ಸೇರಿ ಸಿನಿಮಾ ಮಾಡದಿರಲು ಕಾರಣ ನಾವೇ. ಆ ತಪ್ಪು ನಮ್ಮದೇ. ಆದರೆ, ಇಂದು ಸೇರಲು ಕಾರಣ ಪ್ರೇಕ್ಷಕರು. ಅವರಿಗಾಗಿಯೇ ಈ ಸಿನಿಮಾ ಮಾಡಿದ್ದು. ಸಿನಿಮಾ ಜಗತ್ತು ವ್ಯಾಪಾರವಾಗಿದೆ. ಲಾಭದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದರೆ, ಲಾಭ-ನಷ್ಟಕ್ಕಿಂತ ಹೆಚ್ಚಿನದಾಗಿ ಪ್ರೇಕ್ಷಕರು ನೀಡುವ ತೀರ್ಮಾನವೇ ಅಂತಿಮ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net