"ಬೇಕಿದ್ದರೆ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಿರಿ, ಆದರೆ..."

modikick
Published on

ಕೊಲ್ಕತಾ : ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಪರ ಪ್ರಚಾರ ಮಾಡಲು ಇಂದು ಪಶ್ಚಿಮ ಬಂಗಾಳದ ಬಂಕುರಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿ ಮುಖ್ಯಸ್ಥೆ ಮತ್ತು ಹಾಲಿ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ವಾಗ್ದಾಳಿ ನಡೆಸಿದರು. ತಮ್ಮ ಹತ್ತು ವರ್ಷಗಳ ಆಡಳಿತದಲ್ಲಿ, ದೀದಿ ತಮ್ಮ ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವುದಾಗಿ ಮೋದಿ ಆರೋಪಿಸಿದರು.

ಬಂಗಾಳದ ಬೀದಿಗಳಲ್ಲಿ ಟಿಎಂಸಿ ಕಾರ್ಯಕರ್ತರು ದೀದಿ ಪರ ಪ್ರಚಾರಕ್ಕಾಗಿ ಮಾಡಿರುವ ಗ್ರಾಫಿಟಿಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಅವಮಾನಕರವಾದ ಚಿತ್ರಗಳನ್ನು ಬಿಡಿಸಿ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಅಪಮಾನಿಸಲಾಗುತ್ತಿದೆ ಎಂದರು. 'ಬೇಕಿದ್ದರೆ ನನ್ನ ತಲೆ ಮೇಲೆ ಕಾಲಿಟ್ಟು ಒದೆಯಿರಿ, ಆದರೆ ಬಂಗಾಳದ ಅಭಿವೃದ್ಧಿಯನ್ನು ಆ ರೀತಿ ಕಾಲಿನಿಂದ ಒದೆಯಲು ನಾನು ಬಿಡುವುದಿಲ್ಲ' ಎಂದು ಮೋದಿ ಮಾರ್ಮಿಕವಾಗಿ ನುಡಿದರು.

"ದೀದಿಯ ಜನರು ಆಕೆ ಕಾಲಿನಿಂದ ನನ್ನ ತಲೆಗೆ ಹೊಡೆಯುತ್ತಿರುವ ಮತ್ತು ಫುಟ್​ಬಾಲ್ ಆಡುತ್ತಿರುವ ರೀತಿಯಲ್ಲಿ ಬಂಗಾಳದ ಬೀದಿಗಳಲ್ಲಿ ಗ್ರಾಫಿಟಿ ಮಾಡಿದ್ದಾರೆ. ದೀದಿ, ನೀವ್ಯಾಕೆ ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಗಳನ್ನು ಅಪಮಾನಿಸುತ್ತಿದ್ದೀರಿ? ಬೇಕಿದ್ದರೆ ನನ್ನ ತಲೆಯ ಮೇಲೆ ನಿಮ್ಮ ಕಾಲಿಟ್ಟು ನನ್ನನ್ನು ಒದೆಯಿರಿ. ಆದರೆ, ದೀದಿ, ಬಂಗಾಳದ ಅಭಿವೃದ್ಧಿ ಮತ್ತು ಅದರ ಜನರ ಕನಸುಗಳನ್ನು ಕಾಲಿನಿಂದ ಒದೆಯುವುದಕ್ಕೆ ನಾನು ಬಿಡುವುದಿಲ್ಲ" ಎಂದು ಉಚ್ಛ ಸ್ವರದಲ್ಲಿ ಮೋದಿ ಹೇಳಿದರು.

ಹತ್ತು ವರ್ಷಗಳ ಹಿಂದೆ ಬ್ಯಾನರ್ಜಿ ತಮ್ಮ ನಿಜ ಬಣ್ಣವನ್ನು ತೋರಿದ್ದರೆ, ರಾಜ್ಯದ ಜನತೆ ಅವರನ್ನು ಚುನಾಯಿಸುತ್ತಿರಲಿಲ್ಲ. ಈ ಚುನಾವಣೆಯಲ್ಲಿ ಅವರು ತಮ್ಮ ಸೋಲನ್ನು ನಿರೀಕ್ಷಿಸುತ್ತಿರುವುದರಿಂದ ಈಗ ಎಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಟೀಕಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net