

ರಾಯಪುರ : ಛತ್ತೀಸಗಢದ ರಾಯಪುರದಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕ್ರಿಕೆಟ್ ಪಟು ಸಚಿನ್ ತೆಂಡುಲ್ಕರ್ ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸತೊಂದು ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ "ಸರಿಯಾದ ಹೆಲ್ಮೆಟ್ ಹಾಕಿಕೊಳ್ಳುವುದು ಕ್ರಿಕೆಟ್ ಮೈದಾನದಲ್ಲಿ ಆಟವಾಡುವಾಗ ಮತ್ತು ರಸ್ತೆಯಲ್ಲಿ ಬೈಕ್ ಚಲಿಸುವಾಗ.. ಎರಡೂ ಸಮಯದಲ್ಲಿ ಅತ್ಯವಶ್ಯಕ" ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ, ಬೈಕ್ ಮೇಲೆ ಕುಳಿತಿರುವ ಸಚಿನ್, ತಾವು ತಂಗಿರುವ ಹೋಟೆಲ್ ತುಂಬಾ ದೊಡ್ಡದಾಗಿದೆ. ಆದ್ದರಿಂದ ಓಡಾಡಲು ತಮಗೆ ಸ್ಕೂಟರ್ ಸೌಕರ್ಯ ಇರುವುದು ಒಳ್ಳೆಯ ವಿಷಯ ಎಂದು ಹೇಳುತ್ತಾರೆ. ಹಿಂದಿನಿಂದ ಬರುವ ವೆಸ್ಟ್ ಇಂಡೀಸ್ ತಂಡದ ಕ್ಯಾಪ್ಟನ್ ಬ್ರಿಯಾನ್ ಲಾರಾ ಲಿಫ್ಟ್ ಕೇಳುತ್ತಾರೆ. ಆಗ ಸಚಿನ್ ಹೆಲ್ಮೆಟ್ ಧರಿಸಿ ಎಂದು ಹೇಳುತ್ತಾರೆ. ಜೊತೆಗೆ ತಮಗಾಗಿ ಕ್ರಿಕೆಟ್ ಹೆಲ್ಮೆಟ್ ಇಟ್ಟಿರುವುದನ್ನು ನೋಡಿ ಸರಿಯಾದ ಹೆಲ್ಮೆಟ್ ಧರಿಸುವುದು ತುಂಬಾ ಮುಖ್ಯ ಎನ್ನುತ್ತಾ ಬೇರೆ ಹೆಲ್ಮೆಟ್ ಪಡೆಯುತ್ತಾರೆ.
ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಈ ವಿಡಿಯೋವನ್ನು ವಿವಿಧ ರಾಜ್ಯಗಳ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿ ಶೇರ್ ಮಾಡಿದ್ದಾರೆ, ಸಚಿನ್. ವಿಡಿಯೋದಲ್ಲಿ ಸಾಥ್ ಕೊಟ್ಟ ಲಾರಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಪೋಸ್ಟ್ ಆದ ಮೂರು ಗಂಟೆಗಳಲ್ಲೇ ಅಭಿಮಾನಿಗಳಿಂದ ಸಾವಿರಾರು ಲೈಕ್ಗಳು ಸಿಕ್ಕಿವೆ. ತೆಂಡೂಲ್ಕರ್ರೊಂದಿಗೆ ಪಂದ್ಯಾವಳಿಯಲ್ಲಿ ಆಡುತ್ತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು 'ಆಸ್ಕರ್ ನಾಮಿನೇಷನ್' ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪಂದ್ಯಾವಳಿಯಲ್ಲಿ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವನ್ನು ಮಾರ್ಚ್ 17 ರ ಸೆಮಿಫೈನಲ್ನಲ್ಲಿ ಸೋಲಿಸಿತು. ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ಸ್ನಲ್ಲಿ, ಭಾರತ ತಂಡ ಶ್ರೀಲಂಕಾ ಲೆಜೆಂಡ್ಸ್ ತಂಡದ ವಿರುದ್ಧ ಸೆಣೆಸಲಿದೆ. (ಏಜೆನ್ಸೀಸ್)