

ಮುಂಬೈ : ಗ್ಲಾಮರಸ್ ಚಿತ್ರಗಳೊಂದಿಗೇ ಪ್ರಬಲವಾದ ಸಾಮಾಜಿಕ ಸಂದೇಶ ಹೊಂದಿರುವ ಚಿತ್ರಗಳನ್ನೂ ಮಾಡಿ ಹೆಸರು ಗಳಿಸಿರುವ ಬಾಲಿವುಡ್ ತಾರೆ ರಾಣಿ ಮುಖರ್ಜಿ ಅವರ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಮತ್ತೊಂದು ಪ್ರಭಾವೀ ಕಥೆ ಹೊಂದಿದ ಅವರ ನಟನೆಯ 'ಮಿಸಸ್ ಚಟರ್ಜಿ ವರ್ಸಸ್ ನಾರ್ವೇ' ಚಿತ್ರ, ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಸುದ್ದಿ ಹೊರಬಿದ್ದಿದೆ.
ಇಂದು (ಮಾರ್ಚ್ 21) 43 ವರ್ಷ ವಯೋಮಾನವನ್ನು ಪೂರೈಸುತ್ತಿರುವ ಮುಖರ್ಜಿ ಅವರು ನಟನೆಯ ಕ್ಷೇತ್ರ ಪ್ರವೇಶಿಸಿ 25 ವರ್ಷಗಳಾಗಿವೆ. ಅವರು ಮೊದಲು ನಟಿಸಿದ್ದು ತಮ್ಮ 16ನೇ ವಯಸ್ಸಿನಲ್ಲಿ, 1996 ರಲ್ಲಿ ಬಿಡುಗಡೆಗೊಂಡ 'ಬಿಯೇರ್ ಫೂಲ್' ಎಂಬ ಬಂಗಾಳಿ ಚಿತ್ರದಲ್ಲಿ. ಹಿಂದಿ ಚಿತ್ರ 'ರಾಜಾ ಕಿ ಆಯೇಗಿ ಬರಾತ್'ನಿಂದ ಬಾಲಿವುಡ್ಗೆ ಎಂಟ್ರಿ ಕೊಟ್ಟರೂ, ಮೊದಲ ಹಿಟ್ ಚಿತ್ರ ಆಮೀರ್ ಖಾನ್ ಜೊತೆ ನಟಿಸಿದ 'ಘುಲಾಮ್'. ನಂತರ "ಕುಚ್ ಕುಚ್ ಹೋತಾ ಹೇ"ನಿಂದ ಅವರು ಅಭಿಮಾನಿಗಳ ಮನಸೂರೆಗೊಂಡರು.
ಗ್ಲಾಮರಸ್ ಚಿತ್ರಗಳಲ್ಲಷ್ಟೇ ಅಲ್ಲ, ನಟನೆಯೇ ಪ್ರಧಾನವಾದ ವಿಭಿನ್ನ ಪಾತ್ರಗಳನ್ನು ಹೊಂದಿದ 'ಚೋರಿ ಚೋರಿ ಚುಪ್ಕೆ ಚುಪ್ಕೆ', 'ಮರ್ದಾನಿ', 'ಹಿಚಕಿ' ಮುಂತಾದ ಸಿನಿಮಾಗಳ ಮೂಲಕ ರಾಣಿ ಮುಖರ್ಜಿ ಹೆಸರು ಮಾಡಿದ್ದಾರೆ. ಈಗ ಚಿತ್ರೀಕರಣಕ್ಕೆ ತಯಾರಾಗುತ್ತಿರುವ ಅವರ ಹೊಸ ಚಿತ್ರ 'ಮಿಸಸ್ ಚಟರ್ಜಿ ವರ್ಸಸ್ ನಾರ್ವೇ' ಕೂಡ "ಒಂದು ಮಹಿಳೆಯ ಹೇಳಲೇಬೇಕಾದಂಥ ಪ್ರಬಲವಾದ ಕಥೆಯಾಗಿದೆ" ಎಂದು ಅವರು ಹೇಳಿದ್ದಾರೆ.
ಜೀ ಸ್ಟುಡಿಯೋಸ್ ಈ ಚಿತ್ರದ ಬಗ್ಗೆ ಶೇರ್ ಮಾಡಿರುವ ವಿವರಗಳನ್ನು ನೋಡಿ -
ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಎಮ್ಮೇ ಎಂಟರ್ಟೇನ್ಮೆಂಟ್ ನಿರ್ಮಿಸುತ್ತಿದ್ದು, ಅಶೀಮಾ ಚಿಬ್ಬರ್ ನಿರ್ದೇಶಿಸಿದ್ದಾರೆ. ನೈಜ ಘಟನೆಗಳನ್ನಾಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಇಡೀ ದೇಶವೊಂದರ ವಿರುದ್ಧ ಒಬ್ಬ ತಾಯಿಯ ಹೋರಾಟವನ್ನು ತೋರಿಸಲಾಗಿದೆಯಂತೆ. ಇದು "ಎಲ್ಲ ತಾಯಂದಿರಿಗೂ ಮುಡಿಪಾದ ಚಿತ್ರ" ಎಂದು ಮುಖರ್ಜಿ ಹೇಳಿದ್ದಾರೆ. (ಏಜೆನ್ಸೀಸ್)