

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್ನ ಐಕಾನ್ ಸ್ಟಾರ್, ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪ 2: ದಿ ರೂಲ್' ಚಿತ್ರದ ಬಿಡುಗಡೆ ದಿನಾಂಕ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ.
ಪ್ಯಾನ್ ಇಂಡಿಯಾ ಚಿತ್ರವಾದ 'ಪುಷ್ಪ: ದಿ ರೈಸ್' ಚಿತ್ರದ ಮುಂದುವರಿದ ಭಾಗವಾದ 'ಪುಷ್ಪ 2: ದಿ ರೂಲ್' ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಚಿತ್ರ ಹೇಗಿರಲಿದೆ? ಯಾವೆಲ್ಲಾ ಆಕ್ಷನ್ ಸೀಕ್ವೆನ್ಸ್ ಇರಲಿದೆ ಎಂಬ ಕುತೂಹಲವನ್ನು ಮೂಡಿಸಿದೆ. ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ರಿಲೀಸ್ ದಿನಾಂಕ ಇದೀಗ ಹೊರಬಿದ್ದಿದೆ.
'ಪುಷ್ಪಾ 2: ದಿ ರೂಲ್' ಚಿತ್ರವನ್ನು ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಪೋಸ್ಟರ್ ಮೂಲಕ ದಿನಾಂಕವನ್ನು ನಿಗದಿಪಡಿಸಿದೆ. ಚಿತ್ರವು ಭಾರತೀಯ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಫಹದ್ ಫಾಸಿಲ್, ಅನಸೂಯಾ ಭಾರದ್ವಾಜ್, ಸುನೀಲ್, ಜಗದೀಶ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).