

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ ಶಾಸನಾತ್ಮಕ ಮೀಸಲಿರಿಸಿದ ಅನುದಾನದಲ್ಲಿ 11,144 ಕೋಟಿ ರೂ. ಅನ್ಯ ಯೋಜನೆಗೆ ಬಳಕೆಗೆ ಅವಕಾಶವಿಲ್ಲ. ಶೋಷಿತರಿಗೆ ಈ ಅನುದಾನ ಮರಳಿಸಿ ಇಲ್ಲವೇ ಹೋರಾಟ ಎದುರಿಸಿರಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಎಚ್ಚರಿಸಿದ್ದಾರೆ.
ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಸಿಟಿಜನ್ ಾರ್ ಸೋಷಿಯಲ್ ಜಸ್ಟೀಸ್ ಬೆಂಗಳೂರು ಇವರಿಂದ ಸೋಮವಾರ ಆಯೋಜಿಸಿದ್ದ ‘ಎಸ್ಸಿ, ಎಸ್ಟಿ ಮೀಸಲು ಮುಳುಗಿಸುತ್ತಿರುವ ಸರ್ಕಾರ’ ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಎಸ್ಸಿ, ಎಸ್ಟಿ ಮೀಸಲು ಮೊತ್ತದಿಂದ 11,144 ಕೋಟಿ ರೂ. ದುರುಪಯೋಗದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಪ್ರಬಲ ಹೋರಾಟ ಪ್ರಾರಂಭಿಸಿ ಎಂದು ಮನವಿ ಮಾಡಿದರು.
ಡೋಂಗಿ ಮಾತು, ಸುಳ್ಳು ಭರವಸೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸ ಮಾಡಲು ಮುಂದಾಗಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳ ಶಿಕ್ಷಣ, ಆರೋಗ್ಯ, ಕಲ್ಯಾಣಕ್ಕಾಗಿ ಈ ಹಣವನ್ನು ಬಳಸಬೇಕಾಗಿದೆ. ಸರ್ಕಾರದ ಮನಸ್ಸಿಗೆ ಬಂದಂತೆ ಬಳಸಲು ಅಲ್ಲವೆಂದು ಗೋವಿಂದ ಕಾರಜೋಳ ಕಿಡಿಕಾರಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ ಬಿಜೆಪಿ ಆಡಳಿತಾವಧಿಯಲ್ಲಿ ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ, ಎಸ್ಸಿ ಒಳ ಮೀಸಲು ಸೌಲಭ್ಯ ಸೇರಿ ಹಲವು ಒಳ್ಳೆಯ ಕೆಲಸ ಮಾಡಿದ್ದರೂ ಮರೆತು ಹೋಗಿದೆ ಎಂಬ ಬೇಸರ ಹೊರ ಹಾಕಿದ ಅವರು, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಲ್ಲಿ ಬಿಜೆಪಿ ಸದಾ ಮುಂದಿದೆ ಎಂದರು.
ಜಾತಿಪ್ರಮಾಣತದ ವಿಚಾರದಲ್ಲೂ ಇವತ್ತು ಸಾಕಷ್ಟು ಗೊಂದಗಳು ನಡೆದಿವೆ. ಡಾ.ಅಂಬೇಡ್ಕರ್ ವಿಚಾರಗಳನ್ನು ಇಟ್ಟುಕೊಂಡು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಶೋಷಿತರು ತಮ್ಮ ಹಕ್ಕು, ನ್ಯಾಯಕ್ಕಾಗಿ ಹೋರಾಟ ಮಾಡಲೇಬೇಕಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ ವಿಶೇಷ ಘಟಕ ಯೋಜನೆಯಡಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಕೊಡುವುದು ಅನ್ಯಾಯ, ಮೋಸ ಹಾಗೂ ಸಮುದಾಯಗಳಿಗೆ ಎಸಗುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್, ಪಕ್ಷದ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಸಚಿವರು, ಮಾಜಿ ಶಾಸಕರು ಇದ್ದರು.