

ದೆಹಲಿ: ಮಾಜಿ ಕುಸ್ತಿಪಟು ಮತ್ತು ಬಿಜೆಪಿ ನಾಯಕಿ ಬಬಿತಾ ಫೋಗಟ್ ಭಾನುವಾರ ಪ್ರತಿಭಟನಾ ನಿರತ ಕುಸ್ತಿಪಟು ಸಾಕ್ಷಿ ಮಲಿಕ್ ಹಾಗೂ ಆಕೆಯ ಪತಿ ಮೇಲೆ ಕಟುವಾದ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ನ ಕೈಗೊಂಬೆ ಎಂದು ಕರೆದಿದ್ದಾರೆ.
ಶನಿವಾರದಂದು ಸಾಕ್ಷಿ ಮಲಿಕ್ ಹಾಗೂ ಆಕೆಯ ಪತಿ ಟ್ವಿಟರ್ನಲ್ಲಿ 11 ನಿಮಿಷಗಳ ಅವಧಿಯ ವೀಡಿಯೊವನ್ನು ಪೋಸ್ಟ್ ಮಾಡಿ ನಮ್ಮ ಹೋರಾಟ ಏನಿದ್ದರೂ ಸಿಂಗ್ ವಿರುದ್ಧ ಮಾತ್ರ ಸರ್ಕಾರದ ವಿರುದ್ಧವಲ್ಲ. ನಾವು ಪ್ರತಿಭಟನೆಯನ್ನು ನಡೆಸಲು ಇಬ್ಬರು ಬಿಜೆಪಿ ನಾಯಕರಿಂದ ಅನುಮತಿಯನ್ನು ಪಡೆದಿದ್ದೆವು ಎಂದು ಹೇಳಿದ್ದರು.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಉಪವಾಸವಿದ್ದು ಪ್ರಾಣ ಬಿಟ್ಟ ಯುವತಿ!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಬಿತಾ, ನಾನು ನನ್ನ ತಂಗಿ ಮತ್ತು ಅವಳ ಗಂಡನ ವೀಡಿಯೊವನ್ನು ನೋಡಿದಾಗ ನನಗೆ ತುಂಬಾ ದುಃಖವಾಯಿತು, ಮೊದಲನೆಯದಾಗಿ ನನ್ನ ತಂಗಿ ತೋರಿಸುತ್ತಿರುವ ಅನುಮತಿ ಪತ್ರದಲ್ಲಿ ನನ್ನ ಸಹಿ ಇರಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಅಥವಾ ಅದರ ಮೇಲೆ ಎಲ್ಲಿಯೂ ನನ್ನ ಹೆಸರು, ನನ್ನ ಒಪ್ಪಿಗೆ ಕುರಿತಾದ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
ನಾನು ಎಲ್ಲಾ ಕುಸ್ತಿಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ, ಈ ಸಮಸ್ಯೆಯನ್ನು ಅವರು ಪರಿಹರಿಸುತ್ತಾರೆ ಎಂದು ಪದೇ ಪದೇ ಹೇಳಿದ್ದೇನೆ. ಆದರೆ ಅವರು ಕಾಂಗ್ರೆಸ್ ನಾಯಕರು ಹಾಗೂ ಮತ್ತಿತರಿಂದ ಸಹಾಯವನ್ನು ಪಡೆದಿದ್ದಾರೆ. ಅಲ್ಲದೇ, ಹೊಸ ಸಂಸತ್ತಿನ ಉದ್ಘಾಟನಾ ದಿನದಂದು ಕುಸ್ತಿಪಟುಗಳು ಪ್ರತಿಭಟನೆ ನಡೆಸಿ ಮತ್ತು ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಬೆದರಿಕೆ ಹಾಕಿ ದೇಶದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ಬಬಿತಾ ಕಿಡಿಕಾರಿದ್ದಾರೆ.(ಏಜೆನ್ಸೀಸ್)