

ಬೆಂಗಳೂರು: ಅಪೆಕ್ಸ್ ಬ್ಯಾಂಕ್‌ನ ಸಹಾಯಕರ ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದವರ ಪಟ್ಟಿ ಇನ್ನೂ ಏಕೆ ಬಿಡುಗಡೆಗೊಳಿಸಿಲ್ಲ ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಎಕೆಎಸ್ಎಸ್ ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಪಟ್ಟಿ ಬಿಡುಗಡೆಗೊಳಿಸುವಂತೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಆಲ್ ಕರ್ನಾಟಕ ಸ್ಟೇಟ್ ಸೂಡೆಂಟ್ಸ್ ಅಸೋಸಿಯೇಷನ್ ಸಂಘಟನೆಯ(ಎ- ಕೆಎಸ್‌ಎಸ್) ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಪರೀಕ್ಷೆ ಬರೆದ ಅಭ್ಯರ್ಥಿಗಳು, 'ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ್ರವರು ಸಿಎಂ ಒಮ್ಮೆ ಕರೆ ಮಾಡಿ ತಿಳಿಸಿದರೆ ನಾವು ಸಂದರ್ಶನ ಪಟ್ಟಿಯನ್ನು ಈ ಕೂಡಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳ್ತಿದ್ದಾರೆ. ಆಡಳಿತ ಮಂಡಳಿಯವರು ಮತ್ತು ಸರ್ಕಾರ ನೇಮಕಾತಿಯನ್ನು ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
"ನಾವು ಸಾಕಷ್ಟು ಬಾರಿ ಬ್ಯಾಂಕ್ಗೆ ಭೇಟಿ ನೀಡಿ ಮಾನ್ಯ ಅಧ್ಯಕ್ಷರಿಗೆ ಮನವಿ ನೀಡಿದ್ದೇವೆ. ಆದರೆ, ಅವರು ಮಾತ್ರ ಮುಖ್ಯಮಂತ್ರಿಗಳು ಮತ್ತು ಸಹಕಾರ ಸಚಿವರಾದ ರಾಜಣ್ಣನವರು ಪರ್ಮಿಷನ್ ಕೊಟ್ಟಿಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ. 2024ರ ಮಾರ್ಚ್ 5ರಂದು ಅಪೆಕ್ಸ್ ಬ್ಯಾಂಕ್ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಸೆಪ್ಟೆಂಬರ್ 1ರಂದು ಪರೀಕ್ಷೆ ನಡೆಸಲಾಯಿತು. ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು (ಕೀ ಆನ್ಸರ್) ಪ್ರಕಟಿಸಲಾಯಿತು. ಇದಾಗಿ ವರ್ಷ ಕಳೆಯುತ್ತಾ ಬಂದರೂ ಮುಂದಿನ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ" ಎಂದು ಪ್ರತಿಭಟನಕಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಂದರ್ಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಬೇಕು. ನೇಮಕಾತಿಯನ್ನು ಪೂರ್ಣಗೊಳಿಸಬೇಕು. ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹೆಚ್ಚು ಕಾಲ ಮುಂದೂಡದೆ, ಮುಂದಿನ 15 ದಿನಗಳೊಳಗೆ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ, ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಾಗುತ್ತದೆ" ಎಂದು ಸಂಘದ ಅಧ್ಯಕ್ಷ ಕಾಂತಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.