ಮನೆಬಿಟ್ಟು ಓಡಿಹೋದಳು..! 2 ತಿಂಗಳ ಹಿಂದೆ ಕಾಣೆಯಾಗಿದ್ದ ಸೊಸೆ ಶವವಾಗಿ ಪತ್ತೆ; ಭಯಾನಕ ಕೃತ್ಯ ಕಡೆಗೂ ಬೆಳಕಿಗೆ | Murder

ವಿಜಯವಾಣಿ (77)
Published on

Murder Case: ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದ ಮಹಿಳೆಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹ ಆಕೆಯ ಗಂಡನ ಮನೆಯ ಮುಂದಿದ್ದ ಹೊಸ ರಸ್ತೆಯ 10 ಅಡಿ ಗುಂಡಿಯಲ್ಲಿತ್ತು ಎಂಬುದೇ ಸದ್ಯ ಆಶ್ಚರ್ಯ ಹಾಗೂ ಬೆಚ್ಚಿ ಬೀಳಿಸುವ ಸಂಗತಿಯಾಗಿದೆ. ಈ ಪ್ರಕರಣ ಖಾಕಿ ಪಡೆಯನ್ನು ಅಚ್ಚರಿಗೊಳಿಸಿದ್ದು, ತನಿಖೆ ಮೂಲಕ ಸತ್ಯವನ್ನು ಕಡೆಗೂ ಆರೋಪಿಗಳಿಂದ ಕಕ್ಕಿಸಿದ್ದಾರೆ.

ಏನಿದು ಘಟನೆ?

ಹರಿಯಾಣದ ಫರಿದಾಬಾದ್‌ನ ವಸತಿ ಬೀದಿಯೊಂದರಲ್ಲಿ 10 ಅಡಿ ಆಳದ ಗುಂಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ ತನು (24) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆಯಷ್ಟೇ ಫರಿದಾಬಾದ್‌ನ ರೋಶನ್ ನಗರದ ನಿವಾಸಿ ಅರುಣ್ ಎಂಬಾತನನ್ನು ಮದುವೆಯಾಗಿದ್ದ ಯುವತಿ, ಇದೀಗ ಕೊಲೆಯಲ್ಲಿ ದುರಂತ ಅಂತ್ಯ ಕಂಡಿರುವುದು ಸದ್ಯ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಪೊಲೀಸರ ಮಾಹಿತಿ ಪ್ರಕಾರ, ಗಂಡನ ಮನೆಯಲ್ಲಿದ್ದ ತನು, ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದಳು. ಇದನ್ನು ಪ್ರಶ್ನಿಸಿದ್ದ ತನು ಸಹೋದರಿ ಪ್ರೀತಿ, ನನ್ನ ಅಕ್ಕ ಕರೆಗೆ ಮತ್ತು ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ. ನಿಮ್ಮ ಮನೆಯಲ್ಲಿದ್ದ ಅವಳು ಎಲ್ಲಿ ಹೋದಳು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿದ ಆಕೆಯ ಅತ್ತೆ, ಅವಳು ಯಾರೊಂದಿಗೋ ಮನೆಬಿಟ್ಟು ಓಡಿ ಹೋಗಿದ್ದಾಳೆ ಎಂಬ ಕಟು ಮಾತುಗಳನ್ನಾಡಿದ್ದರು. ಇದರಿಂದ ಕುಪಿತಗೊಂಡ ಪ್ರೀತಿ, ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​ ದಾಖಲಿಸಿದ್ದರು. ಅಂತೆಯೇ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಯುವತಿಯ ಅತ್ತೆ ಮನೆಯವರೇ ಕೊಲೆಗಡುಕರು ಎಂಬುದು ತನಿಖೆ ಮೂಲಕ ಸಾಬೀತಾಯಿತು.

ಸ್ಥಳೀಯರೇ ಸುಳಿವು

ಗಂಡನ ಮನೆಗೆ ಹೋದ ಬಳಿಕ ಚಿನ್ನಾಭರಣ ಮತ್ತು ಹಣ ತೆಗೆದುಕೊಂಡು ಬರುವಂತೆ ತನುಗೆ ಆಕೆಯ ಅತ್ತೆ ಮನೆಯವರು ಪದೇ ಪದೇ ಹಿಂಸಿಸುತ್ತಿದ್ದರು. ಈ ಬಗ್ಗೆ ಅಕ್ಕ ನಮ್ಮಲ್ಲಿ ದೂರಿದ್ದಳು. ವರದಕ್ಷಿಣೆ ವಿಚಾರವಾಗಿ ಆಕೆಯ ಗಂಡ, ಅತ್ತೆ ಮತ್ತು ಮಾವ ತೀರ ಮಾನಸಿಕ ಹಿಂಸೆ ಕೊಡುತ್ತಿದ್ದರು. ಇದೇ ವಿಷಯಕ್ಕೆ ಅವಳು ಗಂಡನ ಮನೆಬಿಟ್ಟು ಕೆಲವು ದಿನಗಳ ಕಾಲ ತವರಿಗೆ ಬಂದಿದ್ದಳು. ಅವರು ಅವಳಿಗೆ ನಮ್ಮ ಜೊತೆ ಫೋನ್ ಕಾಲ್, ಸಂದೇಶ ಕಳಿಸಲು ಅನುಮತಿ ಕೊಡುತ್ತಿರಲಿಲ್ಲ. ಇದರಿಂದ ಸಹೋದರಿ ತೀರ ಬೇಸತ್ತಿದ್ದಳು. ಒಂದಷ್ಟು ಧೈರ್ಯ ಮತ್ತು ಬುದ್ಧಿ ಮಾತುಗಳನ್ನೇಳಿ, ಅವಳನ್ನು ತವರಿಗೆ ವಾಪಾಸ್ ಕಳಿಸಿದ್ದೆವು. ಆದ್ರೆ, ಹಿಂಸೆ ಮತ್ತು ಮುಂದುವರಿದಿತ್ತು. ಏಪ್ರಿಲ್​ನಲ್ಲಿ ಆಕೆಯ ಸುಳಿವು ನಮಗೆ ಸಿಗಲಿಲ್ಲ ಎಂದು ಪ್ರೀತಿ ಹೇಳಿದ್ದಾರೆ.

ಅತ್ತೆ ಮನೆಯವರು ಅರೆಸ್ಟ್​!

ಕೆಲವು ತಿಂಗಳುಗಳ ಹಿಂದೆ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ರಸ್ತೆ ಅಗೆದಿದ್ದ ಪಾಲಿಕೆ, ಅದನ್ನು ಪ್ರಗತಿಯ ಸಲುವಾಗಿ ಹಾಗೆಯೇ ಬಿಟ್ಟಿತ್ತು. ಇದನ್ನೇ ಉಪಾಯ ಮಾಡಿಕೊಂಡ ತನು ಅತ್ತೆ ಮನೆಯವರು, ಆಕೆಯನ್ನು ಕೊಂದು, ಅದೇ ರಸ್ತೆಯಲ್ಲಿ 10 ಅಡಿ ಗುಂಡಿ ತೆಗೆದು ಹೂತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಬಂದ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಕಾಮಗಾರಿ ನಡುವೆ ಪ್ರತ್ಯೇಕವಾಗಿ ಅವರ ಮನೆ ಎದುರಿಗೆ ದೊಡ್ಡ ಗುಂಡಿ ಅಗೆದಿದ್ದು ನಮಗೆ ಕಂಡಿತು. ಮರುದಿನ ನೋಡುವುದರೊಳಗೆ ಆ ಗುಂಡಿಯನ್ನು ಸಿಮೆಂಟ್​ನಿಂದ ಮುಚ್ಚಲಾಗಿತ್ತು ಎಂದು ಸುಳಿವು ನೀಡಿದರು. ಇದನ್ನು ಪರಿಗಣಿಸಿ, ರಸ್ತೆ ಅಗೆಸಿದ ಪೊಲೀಸರಿಗೆ ತನು ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇಂದು ಬೆಳಗ್ಗೆ 8 ಗಂಟೆಗೆ ಮೃತದೇಹವನ್ನು ವಶಪಡಿಸಿಕೊಂಡಿರುವ ಖಾಕಿ ಪಡೆ, ಸಾವಿನ ನಿಖರವಾದ ಸಮಯ ಮತ್ತು ಕಾರಣವನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣದಡಿ ಸದ್ಯ ಮೃತ ತನು ಅವರ ಪತಿ, ಅತ್ತೆ, ಮಾವ ಮತ್ತು ಓರ್ವ ಸಂಬಂಧಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net