

ದಾವಣಗೆರೆ: ಮಾಹಿತಿ ಹಕ್ಕು ಆಯೋಗದಿಂದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಬರುವ ನವೆಂಬರ್ನಲ್ಲಿ ಅದಾಲತ್ ಮಾದರಿಯಲ್ಲಿ ಕಲಾಪ ನಡೆಸಲಾಗುವುದು ಎಂದು ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದ್ದಾರೆ.
"ಜಿಲ್ಲೆಯಲ್ಲಿ ಆರ್ಟಿಐ ದ್ವಿತೀಯ ಮೇಲ್ಮನವಿ ಒಟ್ಟು 559 ಪ್ರಕರಣಗಳಿದ್ದು, ಇವುಗಳ ಇತ್ಯರ್ಥಕ್ಕೆ ಅದಾಲತ್ ಮಾದರಿಯಲ್ಲಿ ಕಲಾಪ ನಡೆಸುವ ಗುರಿಯಿದೆ. ಮಾಹಿತಿ ಹಕ್ಕು ಕಾಯಿದೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ, ಹೊಣೆಗಾರಿಕೆ, ಭ್ರಷ್ಟಾಚಾರ ತಡೆ ಸೇರಿ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಉಪಯೋಗವಾಗಿದೆ. ಆರ್ಟಿಐ ಕಾಯಿದೆಯಡಿ ಸಲ್ಲಿಕೆಯಾಗುವ ಎರಡನೇ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಆಯೋಗ ಮುಂದಾಗಿದೆ" ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದರು.
ಶನಿವಾರ (ಜು.19) ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುದ್ರಣ್ಣ ಹರ್ತಿಕೋಟೆ, "ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ 10 ಆಯುಕ್ತರು, ಒಬ್ಬರು ಮುಖ್ಯ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಎರಡನೇ ಮೇಲ್ಮನವಿಗೆ ಸಂಬಂಧಿಸಿದ 56 ಸಾವಿರ ಪ್ರಕರಣಗಳಿದ್ದು, ಸತತ ಕಲಾಪಗಳನ್ನು ನಡೆಸುವ ಮೂಲಕ ಇವುಗಳನ್ನು 46446ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯ 11428 ಇದ್ದರೆ ಅತೀ ಕಡಿಮೆ ಪ್ರಕರಣಗಳು ಕೊಡಗು ಜಿಲ್ಲೆಯ 75 ಎರಡನೇ ಮೇಲ್ಮನವಿ ಪ್ರಕರಣಗಳಿವೆ. ದಾವಣಗೆರೆಯಲ್ಲಿ 559 ಪ್ರಕರಣಗಳಿದ್ದು ಕಡಿಮೆಯಿರುವ ಜಿಲ್ಲೆಗಳಲ್ಲಿ ಆರನೇ ಸ್ಥಾನದಲ್ಲಿದ್ದು ಹೆಚ್ಚಿನ ಪ್ರಕರಣಗಳಿರುವುದಿಲ್ಲ" ಎಂದರು.
"ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸುವ ಅರ್ಜಿಗಳಿಗೆ ಲಭ್ಯವಿರುವ ದಾಖಲೆಗಳನ್ನು ಒದಗಿಸಬೇಕು. ಅರ್ಟಿಐ ಅಡಿ ಸಲ್ಲಿಸುವ ಅರ್ಜಿಗಳನ್ನು ತಗ್ಗಿಸಲು 4(1) ಎ.ಬಿ ಘೋಷಣೆಯನ್ನು ಮಾಡಿಕೊಳ್ಳಬೇಕು. ಮತ್ತು ಯೋಜನೆಗಳ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ಪ್ರದರ್ಶನ ಮಾಡಿಕೊಂಡಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆಯಾಗಲಿದೆ. ಕಾಯಿದೆಯಡಿ ನಿಗದಿಪಡಿಸಿದ ಸಮಯದಲ್ಲಿಯೇ ಮಾಹಿತಿಯನ್ನು ನೀಡಬೇಕು. ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದ ಹಿಂಬರಹವನ್ನು ನೀಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದಿದ್ದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲ್ಲಿಯೂ ಸರಿಯಾದ ನ್ಯಾಯ ಸಿಗದಿದ್ದಲ್ಲಿ ಎರಡನೇ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಹಕ್ಕು ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕು" ಎಂದು ತಿಳಿಸಿದರು.
ಮತ್ತೊಬ್ಬ ಆಯುಕ್ತ ರಾಜಶೇಖರ್ ಮಾತನಾಡಿ, "ಮಾಹಿತಿ ಹಕ್ಕು ಕಾಯಿದೆ ಎರಡನೇ ಸ್ವಾತಂತ್ರ್ಯ ಹಕ್ಕು ಎಂದರೆ ತಪ್ಪಾಗಲಾರದು. ಕಾಯಿದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಅಫಿಶಿಯಲ್ ಸೀಕ್ರೆಸಿ ಕಾಯಿದೆ ಅನ್ವಯ ಕೇಳಿದ ಮಾಹಿತಿಯನ್ನು ನೀಡಲಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಂದಾಗಿನಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ ಮತ್ತು ಆಡಳಿತದಲ್ಲಿ ಶಿಸ್ತು ಮೂಡಿದೆ. ಆದರೆ, ಕೆಲವರು ಮಾಹಿತಿ ಕೇಳುವುದನ್ನು ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿರಬೇಕು. ಆದರೆ, ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು. ಮಾಹಿತಿ ಹಕ್ಕು ಕಾಯಿದೆಯಡಿ ಕೇವಲ 30 ಸೆಕ್ಷನ್‍ಗಳಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಟಾನ ಮಾಡಬೇಕು. ಯಾವುದೇ ವೇದಿಕೆ, ಸಮಿತಿ ಎಂಬ ಹೆಸರಿನಲ್ಲಿ ಕಾಯಿದೆ ಹೆಸರು ಇರುವಂತಿಲ್ಲ ಮತ್ತು ಇದರ ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ" ಎಂದರು.
"ಒಂದೇ ಮಾಹಿತಿಗೆ ಸಂಬಂಧಿಸಿದಂತೆ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹಲವು ಅರ್ಜಿ ಸಲ್ಲಿಸಿದವರನ್ನು ಕಪ್ಪುಪಟ್ಟಿಗೆ ಸೇರಿಸಲು ಆಯೋಗ ಪರಿಶೀಲಿಸಲಿದೆ. ಅವರು ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಂತಹ ಅರ್ಜಿದಾರರನ್ನು ನಿರ್ಬಂಧಿಸಲಾಗುತ್ತದೆ. ಇಲ್ಲಿಯವರೆಗೆ ಆಯೋಗ 26 ಅರ್ಜಿದಾರರ ಮೇಲೆ ನಿರ್ಬಂಧ ಹಾಕಲಾಗಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಿನಕ್ಕೆ 250 ರಂತೆ ಗರಿಷ್ಠ 25,000 ರೂ.ಗಳವರೆಗೆ ದಂಡ ವಿಧಿಸಲು ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಗರಿಷ್ಠ 1 ಲಕ್ಷದವರೆಗೆ ಮತ್ತು ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ. ಆರ್ಟಿಐ ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಮತ್ತು ಈಗಿರುವ ಅರ್ಜಿ ಶುಲ್ಕ, ಮಾಹಿತಿ ಶುಲ್ಕ, ಸಿಡಿಯಲ್ಲಿ ಹಾಕಿ ನೀಡುವ, ಭೌತಿಕವಾಗಿ ಪರಿಶೀಲಿಸುವ ಅವಧಿಯ ಶುಲ್ಕ ಪರಿಶೀಲನೆಗೆ ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗದಲ್ಲಿ ಪ್ರಸ್ತಾಪಿಸಲಾಗಿದೆ" ಎಂದು ರಾಜಶೇಖರ್ ತಿಳಿಸಿದರು.