ಖಾಕಿ ಮುಂದೆ ನಡೆಯಲಿಲ್ಲ ಕೊಲೆಗಾತಿಯ ನಾಟಕ! ಕಳಚಿಬಿತ್ತು ಪತಿಯನ್ನೇ ಬಲಿಕೊಟ್ಟ ಕಿರಾತಕಿಯ ಅಸಲಿ ಮುಖ | Murder

ವಿಜಯವಾಣಿ (25)
Published on

Husband Murder: ವಿದ್ಯುತ್ ಶಾಕ್​ನಿಂದ ಪತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮತ್ತು ಕುಟುಂಬಸ್ಥರ ಕಣ್ಣಿಗೆ ಮಣ್ಣೆರಚ್ಚಿದ್ದ ಮಹಿಳೆಯ ಅಸಲಿ ಮುಖ ಕಡೆಗೂ ಕಳಚಿ ಬಿದ್ದಿದೆ. ತನ್ನ ಕಾಮತೃಷೆಗೆ ಪತಿಯನ್ನೇ ಬಲಿಕೊಟ್ಟ ಈಕೆಯ ಕೃತ್ಯ ದೆಹಲಿ ಜನತೆಯನ್ನು ಬೆಚ್ಚಿಬೀಳಿಸಿದೆ.

ಒಂದಲ್ಲ, ಎರಡಲ್ಲ ಹಲವು

ಈ ವರ್ಷದಲ್ಲಿ ಹಲವು ಕೊಲೆ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಪತ್ನಿಯೇ ಪತಿಯನ್ನು ಭೀಕರವಾಗಿ ಹತ್ಯೆಗೈದ ಕೇಸ್​ಗಳೇ ಹೆಚ್ಚು. ಇದಕ್ಕೆ ಇತ್ತೀಚಿನ ಹನಿಮೂನ್​ ಕೊಲೆ, ಮುಸ್ಕಾನ್​ ಎಂಬ ಮಹಿಳೆ ತನ್ನ ಪತಿಯ ದೇಹವನ್ನು ಕತ್ತರಿಸಿ, ಡ್ರಮ್​ನಲ್ಲಿ ಮುಚ್ಚಿಟ್ಟ ಹತ್ಯೆ ಪ್ರಕರಣಗಳೇ ಜ್ವಲಂತ ಸಾಕ್ಷಿ. ಇದೀಗ ಈ ಸಾಲಿಗೆ ಇಲ್ಲೊಬ್ಬಳು ಕಿರಾತಕಿ ಸೇರ್ಪಡೆಗೊಂಡಿದ್ದು, ಪತಿಯ ಅಣ್ಣನೊಂದಿಗೆ ಸಂಬಂಧ ಮುಂದುವರಿಸಲು ಕಟ್ಟಿಕೊಂಡ ಗಂಡನನ್ನೇ ಬಲಿಕೊಟ್ಟ ಘಟನೆ ದೆಹಲಿಯ ಉತ್ತಮ್​ ನಗರದಲ್ಲಿ ಸಂಭವಿಸಿದೆ.

ಜುಲೈ 13ರಂದು ಪತಿ ಕರಣ್ ದೇವ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಿರಾತಕಿ ಪತ್ನಿ ಸುಶ್ಮಿತಾ, ನನ್ನ ಪತಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಕುಸಿದುಬಿದ್ದರು ಎಂದು ವೈದ್ಯರ ಬಳಿ ಹೇಳಿದ್ದಳು. ಈ ವೇಳೆ ಆತನನ್ನು ಪರಿಶೀಲಿಸಿದ ವೈದ್ಯ ಸಿಬ್ಬಂದಿ, ಕರಣ್​ ಈಗಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಸೊಸೆಯ ಮಾತನ್ನು ಬಲವಾಗಿ ನಂಬಿದ್ದ ಕರಣ್ ಹೆತ್ತವರು, ಇದೊಂದು ಅಪಘಾತವಿರಬಹುದು. ನಮಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಕೈಬಿಟ್ಟಿದ್ದರು. ಆದ್ರೆ, ಖಾಕಿಯ ಅದೊಂದು ಒತ್ತಾಯ ಇಡೀ ಪ್ರಕರಣದ ಅಸಲಿಯತ್ತನ್ನು ಬೆತ್ತಲಾಯಿಸಿತು.

ಮರಣೋತ್ತರ ಪರೀಕ್ಷೆಯ ಅಸ್ತ್ರ! 

ಮೃತಪಟ್ಟ ಕರಣ್​ ದೇವ್​ನ ವಯಸ್ಸು ಮತ್ತು ಸಾವಿನ ಸಂದರ್ಭವನ್ನು ಶಂಕಿಸಿದ ಖಾಕಿ, ದೇಹವನ್ನು ಶವಪರೀಕ್ಷೆಗೆ ಒಳಪಡಿಸುವುದೇ ಒಳಿತು ಎಂದು ಮೃತನ ಹೆತ್ತವರಿಗೆ ತಿಳಿಸಿತು. ಈ ಮಾತು ಕೇಳ್ತಿದ್ದಂತೆ ಕರಣ್​ ಪತ್ನಿ ಮತ್ತು ಆತನ ಸೋದರ ಸಂಬಂಧಿ ರಾಹುಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾರಣ, ಇವರಿಬ್ಬರ ಕಾಮತೃಷೆಗೆ ಅಮಾಯಕ ಕರಣ್​ ಬಲಿಯಾಗಿದ್ದು. ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ ಬೆನ್ನಲ್ಲೇ ಕರಣ್​ನ ಕಿರಿಯ ಸಹೋದರ ಕುನಾಲ್, ಅಣ್ಣನ ಪತ್ನಿ ಮತ್ತು ಆಕೆಯ ಪ್ರಿಯಕರನೇ ಈ ಕೊಲೆ ಮಾಡಿದ್ದಾರೆ ಎಂದು ಸತ್ಯ ಬಾಯ್ಬಿಟ್ಟ.

ಚಾಟಿಂಗ್​ ರಹಸ್ಯ!

ಕರಣ್ ಪತ್ನಿ ಸುಶ್ಮಿತಾ ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಹುಲ್ ಮಧ್ಯೆ ಏನ್ನೆಲ್ಲ ಆಗಿತ್ತು ಎಂಬುದು ಅವರ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಬಹಿರಂಗವಾಯಿತು. ಈ ಸಾಕ್ಷಿಗಳನ್ನು ತಡಕಾಡಿದ ಖಾಕಿಗೆ ಕೊಲೆಯ ಸಂಚಿನ ಹಿಂದಿದ್ದ ಕಾರಣ ಏನೆಂಬುದು ಸ್ಪಷ್ಟವಾಯಿತು. ಸುಶ್ಮಿತಾಗೆ ಆಕೆಯ ಭಾವನೊಂದಿಗೆ ಸಂಬಂಧವಿತ್ತು. ಇದನ್ನು ಮುಂದುವರಿಸಲು ಪತಿ ಕರಣ್​ ಅಡ್ಡಿಯಾಗಿದ್ದ. ಹೇಗಾದರೂ ಈತನನ್ನು ಮುಗಿಸಬೇಕೆಂದು ಇಬ್ಬರೂ ಸಂಚು ಹೂಡಿದ್ದರು. ಇದಕ್ಕೆ ಒಂದಷ್ಟು ದಿನಗಳ ಕಾಲ ರಿಸರ್ಚ್​ ಕೂಡ ಮಾಡಿದ್ದರು.

ಅದಾದ ಬಳಿಕ 15 ನಿದ್ದೆ ಮಾತ್ರಗಳನ್ನು ಕರಣ್​ಗೆ ಊಟದಲ್ಲಿ ಬೆರೆಸಿ ಕೊಟ್ಟು, ಆತ ಸಾಯುವವರೆಗೂ ಕಾದಿದ್ದಳು ಕಿರಾತಕಿ. ಕರಣ್​ ಚಿರನಿದ್ರೆಗೆ ಜಾರುವ ಕೊನೆ ಕ್ಷಣದಲ್ಲಿ ವಿದ್ಯುತ್​ ಶಾಕ್​ ಕೊಟ್ಟ ಸುಶ್ಮಿತಾ, ತಾನೇ ಹತ್ಯೆಗೈದಿರುವುದು ಎಂದು ತಿಳಿಯಬಾರದು ಎಂಬ ನಿಟ್ಟಿನಲ್ಲಿ ಹೀಗೆ ಮಾಡಿರುವುದು ತನಿಖೆಯಲ್ಲಿ ಬಟಾಬಯಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net