

ಬೆಂಗಳೂರು: ಉತ್ತರ ಪ್ರದೇಶವು 2029ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಗುರಿ ಹೊಂದಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ರಾಕೇಶ್ ಸಚನ್ ತಿಳಿಸಿದ್ದಾರೆ.
ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ ನಿಮಿತ್ತ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಬೆಂಗಳೂರು ರೋಡ್ ಶೋ’ನಲ್ಲಿ ಮಾತನಾಡಿದರು. ಇತ್ತೀಚಿನ ವರ್ಷದಲ್ಲಿ ಉತ್ತರ ಪ್ರದೇಶದ ಆರ್ಥಿಕತೆ ಹಲವು ಪಟ್ಟು ಬೆಳೆದಿದೆ. ಅಂದಾಜು 40 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ 25 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗೆ ಅನುಮೋದಿಸಲಾಗಿದೆ. ನಮ್ಮ ರಾಜ್ಯವು 12 ವಿಮಾನ ನಿಲ್ದಾಣ ಹೊಂದಿದ್ದು, ದೇಶದಲ್ಲೇ ಅತ್ಯುತ್ತಮ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಿದೆ. ದೇಶದಲ್ಲಿರುವ ಅತಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ಪೈಕಿ ಶೇ.14 ನಮ್ಮ ರಾಜ್ಯದಲ್ಲಿದೆ ಎಂದರು.
ಐಟಿ, ಬಯೋಟೆಕ್, ಏರೋಸ್ಪೇಸ್ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ‘ಏಕ ಭಾರತ, ಶ್ರೇಷ್ಠ ಭಾರತ’ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದೊಂದಿಗೆ ಸಹಕರಿಸಲು ಇಲ್ಲಿನ ಉದ್ಯಮದ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ಸೆ. 25ರಿಂದ ಸೆ.29ರವರೆಗೆ ಗ್ರೇಟರ್ ನೋಯ್ಡದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಜಾಗೃತಿ ಮೂಡಿಸಲು ಮತ್ತು ಉದ್ಯಮಿಗಳ ತೊಡಗಿಸಿಕೊಳ್ಳವಿಕೆಯನ್ನು ಸೃಷ್ಟಿಸಲು ರಾಷ್ಟ್ರವ್ಯಾಪಿ ರೋಡ್ ಶೋ ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಆಹಾರ ಸಂಸ್ಕರಣೆ, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಕರಕುಶಲ ವಸ್ತುಗಳು, ಉಡುಪು, ಸುಗಂಧ, ಧೂಪದ್ರವ್ಯ ಮತ್ತು ಅಗರಬತ್ತಿ ಸೇರಿ ವಿವಿಧ ಕ್ಷೇತ್ರಗಳ ಅಂದಾಜು 250 ರಫ್ತುದಾರರು, ಉದ್ಯಮದ ಮುಖಂಡರು ಭಾಗಿಯಾಗಿದ್ದರು.ಇಪಿಸಿಎಚ್‌ನ ಅಧ್ಯಕ್ಷ ಡಾ. ನೀರಜ್ ಖನ್ನಾ, ಉತ್ತರ ಪ್ರದೇಶ ಸರ್ಕಾರದ ಕೈಗಾರಿಕಾ ಇಲಾಖೆ ಹೆಚ್ಚುವರಿ ಆಯುಕ್ತ ರಾಜ್ ಕಮಲ್ ಯಾದವ್, ಐಎಂಎಸ್ ಫೌಂಡೇಶನ್ ಎಲ್‌ಯುಬಿಕೆಯ ಅಧ್ಯಕ್ಷ ಎಚ್.ವಿ.ಎಸ್. ಕೃಷ್ಣ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ಹಾಜರಿದ್ದರು.
ಕರ್ನಾಟಕ ಮತ್ತು ಉತ್ತರ ಪ್ರದೇಶಗಳು ವಿಭಿನ್ನ ಮಾರುಕಟ್ಟೆ ಹೊಂದಿರುವ ರಾಜ್ಯಗಳಾಗಿವೆ. ಕರ್ನಾಟಕವು ಏರೋಸ್ಪೇಸ್, ಐಟಿ ಮತ್ತು ಮಷಿನ್ ಟೂಲ್ಸ್ ಕೇಂದ್ರವಾಗಿದೆ. ಬರುವ ಯುಪಿಐಟಿಎಸ್‌ಗಳಲ್ಲಿ ಉತ್ತರ ಪ್ರದೇಶದಂತಹ ರಾಜ್ಯಗಳೊಂದಿಗೆ ಸಹಕರಿಸಲು ಬಯಸುತ್ತದೆ.
| ಎಂ.ಜಿ. ಬಾಲಕೃಷ್ಣ, ಎಫ್‌ಕೆಸಿಸಿಐ ಅಧ್ಯಕ್ಷ.