

ಅಮೇಠಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇದೇ ಮೊದಲ ಬಾರಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಸೋನಿಯಾ ಗಾಂಧಿ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾರಣ ಅವರ ಕ್ಷೇತ್ರ ತೆರವಾಗಿದೆ. ತಮ್ಮ ಭದ್ರಕೋಟೆಯಲ್ಲಿ ಪುತ್ರಿ ಪ್ರಿಯಾಂಕಾರನ್ನು ಕಣಕ್ಕೆ ಇಳಿಸಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಯ್ಬರೇಲಿ ಕ್ಷೇತ್ರವನ್ನು ತಮ್ಮ ಕುಟುಂಬ ದಲ್ಲೇ ಉಳಿಸಿಕೊಳ್ಳುವುದು ಅವರ ಯೋಜನೆಯಾಗಿದೆ. ಸೋನಿಯಾ ಗಾಂಧಿ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭದ್ರಕೋಟೆಯೆಂದೇ ಪರಿಗಣಿಸಲಾದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು ಪಕ್ಷದ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಘಾಲ್ ಬುಧವಾರ ಹೇಳಿದ್ದಾರೆ. ರಾಹುಲ್ ಅಮೇಠಿಯಿಂದ ಸ್ಪರ್ಧಿಸುವುದು ಖಚಿತವಾಗಿದ್ದು ಶೀಘ್ರವೇ ಅಧಿಕೃತವಾಗಿ ಪ್ರಕಟಿಲಾಗುತ್ತದೆ ಎಂದು ತಿಳಿಸಿದ್ದಾರೆ. 1967ರಲ್ಲಿ ರಚನೆಯಾದಾಗಿನಿಂದಲೂ ಅಮೇಠಿ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿ ಉಳಿದಿದೆ.
ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ 1977ರಲ್ಲಿ ಅಲ್ಲಿ ಸ್ಪರ್ಧಿಸಿ ಸೋತಿದ್ದರು. ತುರ್ತು ಪರಿಸ್ಥಿತಿ ವಿರುದ್ಧದ ಆಕ್ರೋಶವೇ ಆ ಪರಾಭವಕ್ಕೆ ಕಾರಣವಾಗಿತ್ತು. 1980ರಲ್ಲಿ ಸಂಜಯ್ ಅದೇ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅದರ ನಂತರ, ಸಂಜಯ್ ಅಣ್ಣ ರಾಜೀವ್ ಗಾಂಧಿ ರಾಜಕೀಯ ಪ್ರವೇಶಿಸಿದ್ದು 1981ರಲ್ಲಿ ಅಮೇಠಿಯಿಂದ ಕಣಕ್ಕಿಳಿಸಲಾಗಿತ್ತು. ಆಗ ಜಯಭೇರಿ ಬಾರಿಸಿದ್ದ ರಾಜೀವ್ ನಂತರ 1984, 1989 ಮತ್ತು 1991ರಲ್ಲಿ ಪುನರಾಯ್ಕೆಗೊಂಡಿದ್ದರು.