More

    ದುಬೈನಲ್ಲಿ 50 ಕೋಟಿ ರೂ. ಬೆಲೆಯ ಪ್ರಾಪರ್ಟಿ ಗಿಫ್ಟ್​; ಕೊನೆಗೂ ಮೌನ ಮುರಿದ ನಿವೇತಾ

    ಚೆನ್ನೈ: ಬಹುಭಾಷಾ ನಟಿ ನಿವೇತಾ ಪೇತುರತಾಜ್​ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ದುಬೈನಲ್ಲಿ 50 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಮನೆ ಒಂದನ್ನು ಗಿಫ್ಟ್​ ಆಗಿ ನೀಡಿದ್ದಾರೆ ಎಂದು ಸುದ್ದಿ ತೀವ್ರ ಸಂಚಲನ ಮೂಡಿಸಿತ್ತು. ಈ ಬಗ್ಗೆ ಕಾಲಿವುಡ್​ ಅಂಗಳದಲ್ಲಿ ಚರ್ಚೆಯು ಸಹ ಶುರುವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿವೇತಾ ಪೇತುರಾಜ್​ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ ಎಂದು ಎಚ್ಚರಿಸಿದ್ದಾರೆ.

    ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​, ಯೂಟ್ಯೂಬರ್​ ಹಾಗೂ ಪತ್ರಕರ್ತ ಸುವುಕ್ಕು ಶಂಕರ್ ಅವರ ಇತ್ತೀಚಿನ ವಿಡಿಯೋ ತುಣುಕೊಂದು ತಮಿಳುನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸದಾ ತಮ್ಮ ಯೂಟ್ಯೂಬ್​ ಮೂಲಕ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರನ್ನು ಟೀಕಿಸುವ ಶಂಕರ್​, ಇದೀಗ ನಟಿ ನಿವೇತಾ ಪೇತುರಾಜ್​ ಮತ್ತು ಉದಯನಿಧಿ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಶಂಕರ್​ ಆರೋಪಕ್ಕೆ ನಿವೇತಾ ಕೂಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಟಿ, ಇತ್ತೀಚಿಗೆ ನನ್ನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡುವ ಜನರು ಬುದ್ದಿಹೀನವಾಗಿ, ಹುಡುಗಿಯ ಜೀವನವನ್ನು ಹಾಳುಮಾಡುವ ಮೊದಲು, ಸಿಕ್ಕ ಮಾಹಿತಿಯನ್ನು ಪರಿಶೀಲಿಸುವಂತಹ ಮಾನವೀಯತೆಯನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸಿದ್ದೆ. ಹಾಗಾಗಿ, ನಾನು ಮೌನವಾಗಿದ್ದೆ.

    ಇದನ್ನೂ ಓದಿ: 100ನೇ ಟೆಸ್ಟ್​ ಪಂದ್ಯ ಆಡಲಿರುವ ಆರ್​. ಅಶ್ವಿನ್​ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ!

    ನಾನು ಮತ್ತು ನನ್ನ ಕುಟುಂಬ ಕೆಲವು ದಿನಗಳಿಂದ ತೀವ್ರ ಒತ್ತಡದಲ್ಲಿದ್ದೇವೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ. ನಾನು ಬಹಳ ಗೌರವಾನ್ವಿತ ಕುಟುಂಬದಿಂದ ಬಂದವಳು. ನನ್ನ 16ನೇ ವಯಸ್ಸಿನಿಂದಲೇ ನಾನು ನನ್ನ ಸ್ವಂತ ಸಂಪಾದನೆಯಿಂದ ಬದುಕುತ್ತಿದ್ದೇನೆ ಮತ್ತು ಸ್ಥಿರವಾಗಿದ್ದೇನೆ. ನಾವು 20 ವರ್ಷಗಳಿಂದ ದುಬೈನಲ್ಲಿ ಇದ್ದೇವೆ, ನನ್ನ ಕುಟುಂಬ ಇನ್ನೂ ದುಬೈನಲ್ಲಿ ನೆಲೆಸಿದೆ.

    ಚಿತ್ರರಂಗದಲ್ಲಿ ಯಾವೊಬ್ಬ ನಿರ್ಮಾಪಕ, ನಿರ್ದೇಶಕ ಅಥವಾ ನಟರ ಬಳಿ ನನಗೆ ಅವಕಾಶ ಕೊಡಿ ಎಂದು ನಾನು ಕೇಳಿಲ್ಲ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ನಾನು ಹಣಕ್ಕಾಗಿ ಎಂದಿಗೂ ದುರಾಸೆ ಹೊಂದಿದವಳಲ್ಲ. ಇಲ್ಲಿಯವರೆಗೆ ನನ್ನ ಬಗ್ಗೆ ಹರಿದಾಡಿರುವ ಯಾವುದೇ ಮಾಹಿತಿಯು ನಿಜವಲ್ಲ ಎಂದು ನಾನು ಖಚಿತಪಡಿಸುತ್ತಿದ್ದೇನೆ. ನಮ್ಮ ಕುಟುಂಬ 2002ರಿಂದ ದುಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ನಾನು ತುಂಬಾ ಸರಳ ಜೀವನ ನಡೆಸುತ್ತಿದ್ದೇನೆ. ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಿದ ನಂತರ, ಅಂತಿಮವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಇಂದು ನಾನು ಉತ್ತಮ ಸ್ಥಾನದಲ್ಲಿದ್ದೇನೆ. ನಿಮ್ಮ ಕುಟುಂಬದ ಮಹಿಳೆ ಬಯಸುವಂತೆ, ನಾನು ಕೂಡ ಗೌರವಯುತ ಮತ್ತು ಶಾಂತಿಯುತ ಜೀವನವನ್ನು ಮಾಡುವುದಕ್ಕೆ ಬಯಸುತ್ತೇನೆ

    ಈ ವದಂತಿ ಹಬ್ಬಿಸಿದವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ, ಪತ್ರಿಕೋದ್ಯಮದಲ್ಲಿ ಇನ್ನೂ ಸ್ವಲ್ಪ ಮಾನವೀಯತೆ ಉಳಿದಿದೆ ಎಂದು ನಾನು ನಂಬುತ್ತೇನೆ. ಒಬ್ಬರ ಕುಟುಂಬದ ಪ್ರತಿಷ್ಠೆಯನ್ನು ಹಾಳುಮಾಡುವ ಮೊದಲು, ಆ ಕುಟುಂಬ ಸದಸ್ಯರನ್ನು ಯಾವುದೇ ಆಘಾತಗಳಿಗೆ ಸಿಲುಕಿಸುವ ಮೊದಲು, ನಿಮಗೆ ಸಿಕ್ಕ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಎಂದು ನಾನು ಪತ್ರಕರ್ತರಲ್ಲಿ ವಿನಂತಿಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ತುಂಬಾ ಕೃತಜ್ಞಳಾಗಿದ್ದೇನೆ ಎಂದು ನಿವೇತಾ ಪೇತುರಾಜ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts