

ಬೆಂಗಳೂರು: ಐದು ಗ್ಯಾರಂಟಿಗಳ ಭರವಸೆ ಮೇಲೆ ಭರ್ಜರಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇನ್ನು ಎಷ್ಟು ದಿನ ಗ್ಯಾರಂಟಿ ಎಂಬ ಬೆಳವಣಿಗೆಯೊಂದು ಮೂಡಿದೆ. ಅದಕ್ಕೆ ಕಾರಣ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನೀಡಿರುವ ಹೇಳಿಕೆ.
ಕಾಂಗ್ರೆಸ್ನ 40-45 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ, ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ ಎಂದು ಸರ್ಕಾರ ಬೀಳಿಸುವ ಸಾಮರ್ಥ್ಯದ ಕುರಿತು ಬಿ.ಎಲ್. ಸಂತೋಷ್ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಈ ಸವಾಲೆಸೆದಿದ್ದಾರೆ.
ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ. ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು.. ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ? ಎಂದು ಪ್ರಿಯಾಂಕ್ ಖರ್ಗೆ ಚಾಲೆಂಜ್ ಹಾಕಿದ್ದಾರೆ.