

ನವದೆಹಲಿ: ಇಡೀ ದೇಶವೇ ಕರೊನಾ ಸಂಕಷ್ಟದಲ್ಲಿದೆ. ಇದರ ವಿರುದ್ಧ ಮನೆಯಲ್ಲಿರುವ ಮೂಲಕ ಹೋರಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡುತ್ತಿವೆ. ಆದರೆ, ಶಾಲೆಗಳ ಆಡಳಿತ ಮಂಡಳಿಗಳ ಚಿಂತೆಯೇ ಬೇರೆಯಾಗಿದೆ.
ಎಲ್ಲವೂ ಸರಿ ಇದ್ದಿದ್ದರೆ, ಈ ವೇಳೆಗಾಗಲೇ ಶಾಲೆಗಳಲ್ಲಿ ಅದರಲ್ಲೂ ಖಾಸಗಿ ಶಾಲೆಗಳಲ್ಲಿ 'ನೋ ಸೀಟ್ಸ್' ಎಂಬ ಬೋರ್ಡ್ ಹಾಕಿರುತ್ತಿದ್ದರೇನೋ? ಆದರೆ, ಕಳೆದೆರಡು ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಕರೊನಾದಿಂದಾಗಿ ಮನೆಯಿಂದ ಹೊರಗೆ ತೆರಳಲೂ ಕೂಡ ಸಾಧ್ಯವಾಗದ ಸ್ಥಿತಿಯಿದ್ದರೂ, ಶಾಲಾಡಳಿತ ಮಂಡಳಿಗಳು ಮಾತ್ರ ಮಕ್ಕಳ ಪ್ರವೇಶ ಶುಲ್ಕ ಪಾವತಿಸಿ ಸೀಟು 'ಖಾತ್ರಿ' ಮಾಡಿಕೊಳ್ಳುವಂತೆ ಪಾಲಕರಿಗೆ ಸಂದೇಶ ರವಾನಿಸುತ್ತಲೇ ಇವೆ. ಶಾಲೆಗಳು ಇಂಥ ಕೆಲಸಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ, ಪಂಜಾಬ್ 38ಕ್ಕೂ ಹೆಚ್ಚು ಶಾಲೆಗಳಿಗೆ ಇದರ ಬಿಸಿ ತಟ್ಟಿದೆ. ಅಲ್ಲೂ ಕೂಡ ಸರ್ಕಾರ ಈಗಾಗಲೇ ಆದೇಶ ಹೊರಡಿಸಿ, ರಾಜ್ಯದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಕನಿಷ್ಠ 30 ದಿನಗಳ ಕಾಲಾವಕಾಶವನ್ನು ಶುಲ್ಕ ಪಾವತಿಗೆ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
ಇದರ ಹೊರತಾಗಿಯೂ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಿಸಿಕೊಳ್ಳಲು ಫೀ ಕಟ್ಟಿ ಎಂದು ಮೊಬೈಲ್ ಸಂದೇಶ ಹಾಗೂ ದೂರವಾಣಿ ಮೂಲಕ ಪಾಲಕರಿಗೆ ಶಾಲೆಗಳು ಒತ್ತಡ ಹೇರುತ್ತಿವೆ. ಇದು ಗಮನಕ್ಕೆ ಬರುತ್ತಿದ್ದಂತೆ, ಅಲ್ಲಿನ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಕೂಡಲೇ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದ್ದಲ್ಲದೇ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಪಾಲಕರ ಸಂಕಷ್ಟಕ್ಕೂ ಸ್ಪಂದಿಸಿ, ಶುಲ್ಕ ತಡವಾದರೂ ದಂಡ ವಿಧಿಸಬೇಡಿ ಎನ್ನುವುದು ಸರ್ಕಾರದ ಮನವಿ. ಬೆಂಗಳೂರಿನ ಜನರಿಗೆ ಕೊಂಚ ಸಮಾಧಾನದ ವಿಷಯವೆಂದರೆ, ಕೆಲ ಶಾಲೆಗಳು ಈ ಬಾರಿ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿವೆ. (ಏಜೆನ್ಸೀಸ್)