More

    ಸಾವು ಕಣ್ಮುಂದೆ ಕುಣೀತಿತ್ತು- ಆದ್ರೂ ಬದುಕಿ ಉಳಿದೆ..

    ಜೆರುಸಲೇಮ್: ಕರೊನಾ ಸೋಂಕು ವ್ಯಾಪಿಸಿದ ರೀತಿ ಮತ್ತು ಜನರನ್ನು ತಲ್ಲಣಗೊಳಿಸುತ್ತಿರುವ ರೀತಿ ಭಯಾನಕ. ಶತ್ರುವಿನ ಇರುವಿಕೆ ಎಲ್ಲಿ ಎಂಬುದನ್ನು ಅರಿಯದೇ ಯುದ್ಧ ಮಾಡುವಂಥ ಸನ್ನಿವೇಶ ಇದು. ಸೋಂಕು ತಗುಲಿದರೆ ಅದನ್ನು ಗುಣಪಡಿಸುವ ಔಷಧ ಇಲ್ಲದ ಕಾರಣ, ಬದುಕಿದರೆ ಅದೇ ದೊಡ್ಡದು ಎಂಬ ಭಾವ ಎಲ್ಲರಲ್ಲೂ ಇದೆ. ಅಂಥದ್ದರಲ್ಲಿ ಸೋಂಕು ತಗುಲಿದಾಗ, ಸೋಂಕು ತಗುಲಿದವರು ಅನುಭವಿಸುವ ಮಾನಸಿಕ ಸ್ಥಿತಿ ಹೇಗಿರಬಹುದು? ಕೇರಳದ ಮಹಿಳೆಯೊಬ್ಬರು ಅಂಥ ಸ್ವಾನುಭವದ ಸನ್ನಿವೇಶವನ್ನು ಜಗತ್ತಿನೊಂದಿಗೆ ಕೇರಳದ ಆನ್​ಲೈನ್ ಪತ್ರಿಕೆಯ ಮೂಲಕ ಹಂಚಿಕೊಂಡಿದ್ದಾರೆ.

    ಆ ಮಹಿಳೆಯ ಹೆಸರು ಶಿನಿ ಮಾರ್ಕೋಸ್. ಕೋಳಿಕ್ಕೋಡ್​ನ ನಡಕ್ಕಾವ್ ನಿವಾಸಿ. ಪುತ್ತುಪ್ಪಾಡಿ ಚೆಂಬ್ರಂಪಟ್ಟಾದ ಮಾರ್ಕೋಸ್ ಮತ್ತು ಜ್ಯಾನೆಟ್ ದಂಪತಿಯ ಪುತ್ರಿ. ಈ ಮಹಿಳೆಯ ಪತಿ ಸುಮೇಶ್ ಟೋಮ್ಸ್ – ಕೋಳಿಕ್ಕೋಡ್​ ನ ಖಾಸಗಿ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್​. ಇವರಿಗೆ 12ನೇ ತರಗತಿಯಲ್ಲಿ ಓದುತ್ತಿರುವ ಕಾರ್ತಿಕ್ ಎಂಬ ಒಬ್ಬ ಪುತ್ರನಿದ್ದಾನೆ. ಈಕೆ ಇಸ್ರೇಲ್​ನ ಜೆರುಸಲೇಮ್​ನಲ್ಲಿರುವ ನೋಫಿಮ್ ಓಲ್ಡ್ ಏಜ್​ ಹೋಮ್​ನಲ್ಲಿ ಕೇರ್​ಗಿವರ್ ಆಗಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವಿಷ್ಟು ಈಕೆಯ ಪರಿಚಯ. ಇನ್ನು ಅನುಭವ ಈಕೆಯ ಮಾತುಗಳಲ್ಲೇ ಇದ್ದರೆ ಒಳಿತು.

    ” ಅಂದು ಮಾರ್ಚ್ 4. ಅಧಿಕೃತರು ಕರೊನಾ ವೈರಸ್ ಕುರಿತು ಜಾಗೃತಿ ಒದಗಿಸುವ ಕಾರ್ಯಕ್ರಮ ಏರ್ಪಡಿಸಿದ್ದರು. ಅದನ್ನು ಮುಗಿಸಿ ಲಿಫ್ಟ್ ಮೂಲಕ ನಾನು ಕೆಳಗಿದು ಹೋಗಿದ್ದೆ. ದುರದೃಷ್ಟವಶಾತ್ ಅದೇ ಲಿಫ್ಟ್​ನಲ್ಲಿ ಕರೊನಾ ವೈರಸ್​ ಪಾಸಿಟಿವ್ ಇದ್ದ ಸೋಷಿಯಲ್ ವರ್ಕರ್ ಒಬ್ರೂ ಇದ್ದರು. ಹಾಗೆ ನನಗೆ ಸೋಂಕು ತಗುಲಿತು. ಇದಾಗಿ ಎಂಟು ದಿನದ ಬಳಿಕ ಅಂದರೆ ಮಾರ್ಚ್ 12ರಂದು ಬೆಳಗ್ಗೆ ನಾನು ಏಳುವುದಕ್ಕೆ ನೋಡ್ತೇನೆ. ಸಿಕ್ಕಾಪಟ್ಟೆ ತಲೆನೋವು. ಏನು ಮಾಡಿದರೂ ಏಳೋದಕ್ಕೆ ಆಗ್ತಾ ಇರಲಿಲ್ಲ. ಆ ಮೇಲೆ ನಿಧಾನಕ್ಕೆ ಮೈ ಬೆಚ್ಚಗಿರುವುದು ಮನವರಿಕೆಯಾಯಿತು. ಅಷ್ಟೇ ಅಲ್ಲ, ಶರೀರದ ಅಂಗುಲಅಂಗುಲವೂ ನೋವು. ಮಧ್ಯಾಹ್ನದ ವೇಳೆಗೆ ಜ್ವರ ಹೆಚ್ಚಾಯಿತು. ವಾಂತಿ ಮಾಡುವುದಕ್ಕೂ ಆರಂಭಿಸಿದೆ.

    ಇಷ್ಟಾದ ಬಳಿಕ ನಾನು ಆ್ಯಂಬುಲೆನ್ಸ್​ಗೆ ಕರೆ ಮಾಡಿದೆ. ಹದಾಸ್ಸಾಹ್​ ಹಾಸ್ಪಿಟಲ್​ಗೆ ಹೋಗಿ ದಾಖಲಾದೆ. ಅವರು ಅತಿಯಾದ ಜ್ವರದಿಂದ ಬಳಲುತ್ತಿದ್ದ ನನಗೆ ಪ್ಯಾರಾಸಿಟಮಲ್ ಕೊಟ್ರು. ವಾಂತಿ ಮಾಡುವುದು ನಿಲ್ಲಲಿಲ್ಲ. ಜ್ವರ ಏರ್ತಾ ಏರ್ತಾ 108 ಡಿಗ್ರಿ ತನಕ ಏರಿಬಿಟ್ಟಿತ್ತು. ಇನ್ನೇನೂ ಅನ್ನುವಷ್ಟರಲ್ಲಿ, ನಿಧಾನಕ್ಕೆ ಜುಲಾಬು ಶುರುವಾಗಬೇಕೇ?! ಜ್ವರ, ವಾಂತಿ, ಜುಲಾಬು ಸೇರಿ ನನ್ನನ್ನು ಹೈರಾಣಾಗಿಸತೊಡಗಿದೆ ಶುರುವಾಯಿತು ನೋಡಿ ಕೆಮ್ಮು. ನನ್ನ ಆರೋಗ್ಯಸ್ಥಿತಿ ಕ್ಷೀಣಿಸುತ್ತ ಹೋಯಿತು. ಕೂಡಲೇ ನನ್ನನ್ನು ಕ್ರಿಟಿಕಲ್ ಕೇರ್​ ವಾರ್ಡ್​ಗೆ ಶಿಫ್ಟ್​ ಮಾಡಿದ್ರು. ನಂತರ ಅಲ್ಲಿಂದ ವೆರಿ ಕ್ರಿಟಿಕಲ್ ಕೇರ್​ ವಾರ್ಡ್​ಗೆ ಸ್ಥಳಾಂತರಿಸಿದ್ರು. ಇಷ್ಟಾಗುವ ಹೊತ್ತಿಗೆ ನ್ಯುಮೋನಿಯಾ ಅಟ್ಯಾಕ್ ಆಗಿರುವುದು ಖಚಿತವಾಯಿತು.

    ನಂಗೆ ಉಸಿರಾಟ ತುಂಬಾ ಕಷ್ಟವಾಗತೊಡಗಿತ್ತು. ಸುತ್ತ ವೈದ್ಯರ ತಂಡವೇ ಇತ್ತು. ಆದರೆ ಅವರೆಲ್ಲರೂ ನನ್ನನ್ನು ಕ್ಯಾಮರಾ ಮೂಲಕ ನೋಡುತ್ತಿದ್ದರು. ಈ ಸೋಂಕಿಗೆ ಇನ್ನೂ ಔಷಧ ಕಂಡು ಹುಡುಕಿಲ್ಲವಾದ್ದರಿಂದ ನನ್ನ ಮೇಲೆ ಔಷಧಗಳ ಪ್ರಯೋಗವನ್ನು ಮಾಡುತ್ತಿದ್ದರು. ನನಗೆ ನೋವು ಮಾತ್ರ ಅನುಭವಕ್ಕೆ ಬರುತ್ತಿತ್ತು. ಉಸಿರಾಟ ಸರಾಗವಾಗಿ ಮಾಡಬೇಕು ಎಂದು ನಾನು ಚಡಪಡಿಸುತ್ತಿದ್ದೆ. ಎಲ್ಲವೂ ಮಸುಕಾಗತೊಡಗಿತು. ನೆನಪೂ ಇಲ್ಲದಂತಾಯಿತು.

    ಇಷ್ಟೆಲ್ಲ ನಡೆದ ಬಳಿಕ, ಯಾವಾಗಲೋ ನನಗೆ ಮತ್ತೆ ಅರಿವು ಮೂಡಿತು. ಆ ಸಂದರ್ಭದಲ್ಲಿ ಯಾರೋ ಒಂದಷ್ಟು ಜನ ನನ್ನನ್ನು ಎಲ್ಲಿಗೋ ಕರೆದೊಯ್ಯುತ್ತಿದ್ದರು. ಅವರು ಓಡುತ್ತಲೇ ಅಲರಾಂ ಅನ್ನು ಪ್ರೆಸ್ ಮಾಡುತ್ತಲೇ ಇದ್ದರು. ನನ್ನನ್ನು ಆಗ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಇವೆಲ್ಲದರ ನಡುವೆ, ಅವರು ನನ್ನ ಬಳಿ ಅನೇಕ ಪೇಪರ್​ಗಳಿಗೆ ಸಹಿ ಹಾಕಿಸಿಕೊಂಡಿದ್ರು. ಅದು ಫಾರ್ಮಾಲಿಟಿ. ಏನು ಫಾರ್ಮಾಲಿಟಿ ಅಂತೀರಾ? – ನನ್ನ ಸಾವಿಗೆ ನಾನೇ ಕಾರಣ ಎಂಬ ಹೇಳಿಕೆ ಮತ್ತು ಅದಕ್ಕೆ ಪೂರಕ ವೈದ್ಯಕೀಯ ಲೋಕದ ಸಹಜ ಪ್ರಕ್ರಿಯೆಗಳು.

    ನನ್ನ ಕಣ್ಣ ಮುಂದೆ ಸಾವು ಕುಣೀತಾ ಇತ್ತು. ದೇವರನ್ನು ಇನ್ನಿಲ್ಲದಂತೆ ಪ್ರಾರ್ಥಿಸಿದೆ. ನನ್ನ ಬಿಪಿ ಹೆಚ್ಚಾದಾಗ ಮಾನಿಟರ್​ನಲ್ಲಿದ್ದ ಕೆಂಪು ದೀಪ ಹೊತ್ತಿ ಉರಿಯುತ್ತಿತ್ತು. ಆಗ ನರ್ಸ್​ಗಳು ಮತ್ತು ಡಾಕ್ಟರ್​ಗಳು ಓಡೋಡಿ ಬಂದರು. ನಾನು ನೋವಿನೊಂದಿಗೆ ಅವರಿಗೆ ಹೇಳಿದೆ- ನನ್ನ ಮುಖ, ಕೈ ಕಾಲು ಮತ್ತು ಬೆನ್ನನ್ನು ಆ ಕಡೆ ಈ ಕಡೆ ಹೊರಳಿಸಲಾಗುತ್ತಿಲ್ಲ. ನನಗೆ ನಿದ್ದೆ ಮಾಡಬೇಕು ಎಂದೆನಿಸುತ್ತಿದೆ. ಅಷ್ಟೇ ಅವರು ನನಗೆ ನಿದ್ದೆ ಔಷಧ ಕೊಟ್ರು. ನಾನು ಕೆಲವು ಹೊತ್ತು ನಿದ್ದೆಯ ಮಡಿಲಿಗೆ ಜಾರಿದೆ.

    ಇದೇ ರೀತಿ ಮತ್ತೆ ಎಂಟು ದಿನಗಳು ಉರುಳಿ ಹೋದವು. ನನ್ನ ಶರೀರ ಔಷಧಗಳಿಗೆ ಪ್ರತಿಕ್ರಿಯಿಸುವುದಕ್ಕೆ ಶುರುಮಾಡಿತ್ತು. ನರ್ಸ್​ಗಳು ಮತ್ತು ಡಾಕ್ಟರ್​ಗಳು ನಿರಾಳವಾಗಿರುವುದನ್ನು ನಾನು ಗಮನಿಸಿದೆ. ಅವರು ನನ್ನ ಸಮೀಪಕ್ಕೆ ಬರುತ್ತಿದ್ದರು. ನನಗಾಗಿ ಹಾಡು ಹೇಳುತ್ತಿದ್ದರು. ನನ್ನ ಕೈಗಳನ್ನು ಹಿಡಿದು ಸಾಂತ್ವನ ಹೇಳಿದರಲ್ಲದೆ, ಉಗುರುಗಳಿಗೆ ನೈಲ್ ಪಾಲಿಶ್ ಕೂಡ ಹಾಕಿದ್ರು. ಅದು ಅವಿಸ್ಮರಣೀಯ ಸನ್ನಿವೇಶ. ತರುವಾಯ, ನನ್ನ ಬದುಕಿಗಾಗಿ ಸಾವಿರಾರು ಜನ ಪ್ರಾರ್ಥನೆಯನ್ನು ಮಾಡಿದ್ದಾರೆ. ಫೇಸ್​ಬುಕ್ ಮೂಲಕ ಪ್ರತಿಕ್ರಿಯಿಸಿದ್ದಾರೆ ಎಂಬ ವಿಷಯ ಬಹಳ ದಿನಗಳ ಬಳಿಕ ನನ್ನ ಅರಿವಿಗೆ ಬಂತು. ಅವೆರಲ್ಲಿಗೂ ನಾನು ಕೃತಜ್ಞಳಾಗಿದ್ದೇನೆ.

    ಹಾಗಂತ ಈಗಲೂ ನಾನು ಕರೊನಾ ವೈರಸ್ ಸೋಂಕಿನಿಂದ ಪೂರ್ತಿಯಾಗಿ ಗುಣಮುಖಳಾಗಿದ್ದೇನೆ ಎಂದು ಅರ್ಥವಲ್ಲ. ಈಗಲೂ ನಾನು ಕರೊನಾ ವೈರಸ್ ಪಾಸಿಟಿವ್ ರೋಗಿಯೇ. ನನ್ನನ್ನು ಜೆರುಸಲೇಂನ ಡಾನ್ ಹೋಟೆಲ್​ನ ರೂಮ್ ನಂಬರ್ 406ರಲ್ಲಿ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ. ಇಲ್ಲಿ ಈಗ ನಾನು ಇಸ್ರೇಲಿ ಫುಡ್, ಚಿಕನ್​, ಪಾಸ್ತಾ ಮತ್ತು ಇತರೆ ಆಹಾರ ಸೇವಿಸುತ್ತೇನೆ. ಆದರೆ ನನಗೆ ಗಂಜಿ ಮತ್ತು ಉಪ್ಪಿನ ಕಾಯಿ ಬೇಕೆಂದೆನಿಸುತ್ತಿದೆ. ಕೊನೆಗೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ – ಐಸಿಯುನಲ್ಲಿ ಇದ್ದ ದಿನಗಳನ್ನು ಒಮ್ಮೆ ನೆನಪು ಮಾಡಿಕೊಂಡೆ. ಅದಕ್ಕಿಂತ ಈಗ ಸಿಕ್ತಾ ಇರುವುದು ಎಷ್ಟೋ ಬೆಟರ್ ಎಂದು ಹೇಳಿಕೊಂಡೆ.

    ನಾನು ಕರೊನಾ ವೈರಸ್​ ನೆಗೆಟಿವ್ ಎಂಬ ರಿಪೋರ್ಟ್ ಬಂದ ಆ ದಿನ ಹಾಸ್ಪಿಟಲ್​ನ ನರ್ಸ್​ಗಳು ನನ್ನ ಕೈಗಳನ್ನು ಹಿಡಿದು ಚುಂಬಿಸಿದ್ದರಲ್ಲ ಅವರನ್ನೊಮ್ಮೆ ಆಲಿಂಗಿಸಬೇಕು ಎಂದುಕೊಂಡಿದ್ದೇನೆ. ಆ ದಿನಗಳಿಗಾಗಿ ಕಾಯುತ್ತಿದ್ದೇನೆ…. (ಏಜೆನ್ಸೀಸ್)

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts