

ಬೆಂಗಳೂರು: ಪಿಎಸ್‌ಕೆ ನಾಯ್ಡು ಲೇಔಟ್‌ನಲ್ಲಿ ಬುಧವಾರ ನಡೆದಿದ್ದ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಹತ್ಯೆ ಪ್ರಕರಣ ಸಂಬಂಧ ಪುಲಿಕೇಶಿನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ದೊಡ್ಡಗುಬ್ಬಿಯ ಕಿರಣ್, ರಾಹುಲ್ ಬಂಧಿತರು. ಕೃತ್ಯ ಎಸಗಿ ಪರಾರಿಯಾಗಿರುವ ಮತ್ತೊಬ್ಬನ ಪತ್ತೆಗೆ ಬಲೆಬೀಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಹೊಂಚು ಹಾಕಿ ಅಜಿತ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2-3 ವರ್ಷಗಳಿಂದ ಕಿರಣ್ ಮತ್ತು ಅಜಿತ್ ಮಧ್ಯೆ ಮನಸ್ತಾಪವಾಗಿತ್ತು. ಒಂದೂವರೆ ವರ್ಷದ ಹಿಂದೆ ರಾಮಮೂರ್ತಿನಗರ ಸಮೀಪ ಗುರಾಯಿಸಿದ ಎಂಬ ಕಾರಣಕ್ಕೆ ಕಿರಣ್‌ಗೆ ಹಲ್ಲೆ ನಡೆಸಿದ್ದ. ಬಳಿಕ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಜೂ. 19ರಂದು ಹುಟ್ಟುಹಬ್ಬ ನಿಮಿತ್ತ ಸ್ನೇಹಿತರ ಜತೆ ಪಿಎಸ್‌ಕೆ ನಾಯ್ದು ಲೇಔಟ್‌ಗೆ ಬಂದಿದ್ದ ಕಿರಣ್‌ಗೆ ಮತ್ತೆ ಅಜಿತ್ ಹೊಡೆದು ಕಳುಹಿಸಿದ್ದ. ರಾಮಮೂರ್ತಿನಗರದಲ್ಲಿ ಕೊಟ್ಟಿದ್ದ ಹೊಡೆತ ಸಾಕಾಗಿಲ್ವಾ ಎಂದು ಅಜಿತ್ ಲೇವಡಿ ಮಾಡಿದ್ದ. ಇದರಿಂದ ಕೆರಳಿದ ಕಿರಣ್, ಕೊಲೆಗೆ ಸಂಚು ರೂಪಿಸಿ ತನ್ನ ಇಬ್ಬರು ಸ್ನೇಹಿತರನ್ನು ಸಹಾಯ ಕೋರಿದ್ದ.
ಏಳೆಂಟು ದಿನಗಳಿಂದ ಪುಲಿಕೇಶಿನಗರ ಸಮೀಪದ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು ಅಜಿತ್‌ನನ್ನು ಆರೋಪಿಗಳು ಹಿಂಬಾಲಿಸಿ ಆತನ ಚಲನವಲನಗಳ ಮಾಹಿತಿ ಸಂಗ್ರಹಿಸಿದ್ದರು. ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್‌ಗೆ ಅಜಿತ್ ಬರುವುದನ್ನು ಖಚಿತಪಡಿಸಿಕೊಂಡು ಹತ್ಯೆ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.