ಏರೋಸ್ಪೇಸ್ ಸೆಂಟರ್​ಗೆ ಪ್ರಧಾನಿ; ರೋಡ್ ಶೋ ರದ್ದು

PM Modi
Published on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜ್ಯ ಪ್ರವಾಸ ಅಧಿಕೃತವಾಗಿ ನಿಗದಿಯಾಗಿದೆ. ರಾಜ್ಯ ಬಿಜೆಪಿಯು ರೋಡ್​ಶೋ ಪ್ಲಾ್ಯನ್ ಚಿಂತನೆ ಕೈಬಿಟ್ಟಿದೆ. ದೆಹಲಿಯಿಂದ ಶುಕ್ರವಾರ ಬೆಳಗ್ಗೆ ವಾಯುಪಡೆ ವಿಮಾನದಲ್ಲಿ ಮೋದಿಯವರು ಪ್ರಯಾಣ ಬೆಳೆಸಿ, ಕಲಬುರಗಿ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್​ನಲ್ಲಿ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳುವರು.

ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತದೇ ಹೆಲಿಕಾಪ್ಟರ್​ನಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮರಳುವರು. ಅಲ್ಲಿಂದ ವಾಯುಪಡೆ ವಿಮಾನದಲ್ಲಿ ಹೊರಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರಸ್ತೆ ಮಾರ್ಗವಾಗಿ ಸಾರ್ವಜನಿಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದು, ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಉದ್ಘಾಟಿಸಲಿದ್ದಾರೆ. ಅಲ್ಲದೆ, ‘ಬೋಯಿಂಗ್ ಸುಕನ್ಯಾ ಕಾರ್ಯಕ್ರಮ’ಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳಿಗೆ ಒಂದು ತಾಸು ಮೀಸಲಿಟ್ಟಿದ್ದಾರೆ. ರಸ್ತೆ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದು, ವಾಯುಪಡೆ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಡ್ ಶೋ ಡ್ರಾಪ್: ಮೋದಿ ರಾಜ್ಯ ಪ್ರವಾಸದ ಕುರಿತು ರಾಜ್ಯ ಬಿಜೆಪಿಗೆ ಪ್ರಾಥಮಿಕ ಮಾಹಿತಿಯಿತ್ತು. ಆದರೆ ಅಧಿಕೃತ ಪ್ರವಾಸದ ವೇಳಾಪಟ್ಟಿ ಬುಧವಾರ ಲಭ್ಯವಾಗಿದ್ದು, ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಕೊಟ್ಟಿಲ್ಲ. ರೋಡ್​ಶೋಗೆ ಕಾಲಾವಕಾಶ ನೀಡುವ ಬಗ್ಗೆ ಪ್ರಧಾನಿ ಕಚೇರಿಯಿಂದ ಸೂಚನೆ ಸಿಗದಿರುವುದು ಖಚಿತವಾದ ಬಳಿಕ ರಾಜ್ಯ ನಾಯಕರು ರೋಡ್ ಶೋ ಪ್ಲಾ್ಯನ್ ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.

ಬಿಎಸ್​ವೈ ಮತ್ತಿತರರ ಸ್ವಾಗತ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮೋದಿಯವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವಾಗತಿಸಲಿದ್ದಾರೆ. ಏರೋಸ್ಪೇಸ್ ಸೆಂಟರ್​ನಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಬೀಳ್ಕೊಡಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಿಯೋಜಿಸಲಿದ್ದಾರೆ. ಲೈನಪ್​ಗೆ ಒಟ್ಟಾರೆ 100 ಮುಖಂಡರು ಮತ್ತು ಕಾರ್ಯಕರ್ತರಿಗೆ ಅವಕಾಶ ಕೊಡಲು ನಿರ್ಧರಿಸಿದ್ದು, ಗುರುವಾರ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣೆ ನೋಟ, ಮೋದಿ ಓಟ: ಹೊಸ ವರ್ಷದ ಮೊದಲ ತಿಂಗಳಿಂದಲೇ ಪ್ರಧಾನಿ ಮೋದಿ ಓಟ ಶುರುವಾಗಿದೆ. ಲೋಕಸಭೆ ಚುನಾವಣೆೆಗೆ ವೇಳಾಪಟ್ಟಿ ಪ್ರಕಟವಾಗುವ ಮುನ್ನ ದೇಶದ ಸಣ್ಣ ರಾಜ್ಯಗಳಿಗೆ ಒಮ್ಮೆ, ದೊಡ್ಡ ರಾಜ್ಯಗಳಿಗೆ 2-3 ಸಲ ಭೇಟಿ ಪ್ಲಾ್ಯನ್ ಮಾಡಿದ್ದಾರೆ. ಈ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸುವ ಮೂಲಕ ದೇಶದ ಜನತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಸಂದೇಶ ರವಾನಿಸಲಿದ್ದಾರೆ. ಸೋಲಾಪುರದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 350 ಎಕರೆ ಪ್ರದೇಶದಲ್ಲಿ ನಿರ್ವಣವಾಗಿರುವ 30 ಸಾವಿರ ಮನೆಗಳನ್ನು ಉದ್ಘಾಟಿಸುವರು. ಬೆಂಗಳೂರು ಬಳಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್​ನ ಕ್ಯಾಂಪಸ್ 43 ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಒಟ್ಟು 1,600 ಕೋಟಿ ರೂ. ಹೂಡಿಕೆಯಾಗಿದೆ. ಸುಸಜ್ಜಿತ ಕ್ಯಾಂಪಸ್ ಉದ್ಘಾಟಿಸುವ ಜತೆಗೆ ಬೋಯಿಂಗ್ ಸುಕನ್ಯಾ ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net