ಆರೋಗ್ಯ ಕೇಂದ್ರಗಳೇ ಫೀವರ್ ಕ್ಲಿನಿಕ್; ಇಲಾಖೆ ಸುತ್ತೋಲೆ

Sudhakar 10 March 20
Published on

ಬೆಂಗಳೂರು: ಶೀತಜ್ವರ (ಐಎಲ್​ಐ) ಹಾಗೂ ತೀವ್ರ ಉಸಿರಾಟದ ತೊಂದರೆ (ಸಾರಿ) ಹೊಂದಿರುವವರಲ್ಲಿ ಕರೊನಾ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸೋಂಕಿತರ ಪತ್ತೆಗಾಗಿ ರಾಜ್ಯದ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳನ್ನು ಫಿವರ್ ಕ್ಲಿನಿಕ್​ಗಳಾಗಿ ಬದಲಿಸುವುದಾಗಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ತಪಾಸಣೆಯ ಅಗತ್ಯವಿದ್ದು, ಅಧಿಕ ಸಂಖ್ಯೆಯಲ್ಲಿ ಫಿವರ್ ಕ್ಲಿನಿಕ್ ಪ್ರಾರಂಭಿಸಬೇಕಿದೆ. ಇದಕ್ಕಾಗಿ ಮಹಾನಗರ ಮತ್ತು ನಗರ ಪಾಲಿಕೆ ವ್ಯಾಪ್ತಿಯ ಖಾಸಗಿ ಆರೋಗ್ಯ ಸಂಸ್ಥೆಗಳನ್ನು ಫಿವರ್ ಕ್ಲಿನಿಕ್​ಗಳಾಗಿ ಗುರುತಿಸಬಹುದು ಹಾಗೂ ಶೇ.50 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೂಡ ಜ್ವರದ ಕ್ಲಿನಿಕ್​ಗಳಾಗಿ ಮಾರ್ಪಡಿಸಬೇಕು. ಉಳಿದ ಶೇ.50 ಕೋವಿಡ್ ರಹಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡುವಂತೆ ಸೂಚಿಸಲಾಗಿದೆ. ಫಿವರ್ ಕ್ಲಿನಿಕ್​ಗಳಲ್ಲಿ ಕಫ ಮಾದರಿಗಳನ್ನು ಕೂಡ ಸಂಗ್ರಹಿಸಬೇಕು. ಇದಕ್ಕಾಗಿ ಪ್ರತ್ಯೇಕ ಕೊಠಡಿ ಮೀಸಲಿಡಬೇಕು. ಸಂಗ್ರಹಿಸಿದ ಮಾದರಿಯನ್ನು ಪ್ರಯೋಗಾಲಯಗಳಿಗೆ ರವಾನಿಸಲು ಜಿಲ್ಲಾಡಳಿತ ಸೂಕ್ತ ವಾಹನ ವ್ಯವಸ್ಥೆ ಮಾಡಬೇಕಿದೆ. ಮಾದರಿ ಸಂಗ್ರಹಿಸಿದ ಮಾಹಿತಿಯನ್ನು ಪೋರ್ಟಲ್​ನಲ್ಲಿ ದಾಖಲಿಸಬೇಕು. ಈ ಕೇಂದ್ರಗಳಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಚಿಕಿತ್ಸಾ ಸಾಮರ್ಥ್ಯ ವೃದ್ಧಿ: ಕರೊನಾ ಸೋಂಕು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ 11 ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಕೈಜೋಡಿಸಿರುವ ಕಾರಣ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ವೃದ್ಧಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಚೇರಿಗೆ ಗುರುವಾರ ಟ್ವೀಟ್ ಮಾಡಿರುವ ಸಚಿವರು, ಈ 11 ಆಸ್ಪತ್ರೆಗಳಲ್ಲಿ 2,200 ಹಾಸಿಗೆಗಳ ಸವಲತ್ತುಗಳನ್ನು ಮೀಸಲಿಟ್ಟಿದ್ದಾರೆ. ಈ ಪೈಕಿ 281 ಐಸಿಯು ಹಾಗೂ 120 ಹಾಸಿಗೆಗಳು ವೆಂಟಿಲೇಟರ್ ಸೌಲಭ್ಯ ಒಳಗೊಂಡಿವೆ. ಅಲ್ಲದೆ ಪ್ರತಿ ಕಾಲೇಜಿನಲ್ಲಿ ಪರೀಕ್ಷಾ ಪ್ರಯೋಗಾಲಯ ಹಾಗೂ ಕನಿಷ್ಟ ತಲಾ 2 ಫೀವರ್ ಕ್ಲಿನಿಕ್ ಸೌಲಭ್ಯಗಳಿವೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net