ಸೀಟ್ ಬ್ಲಾಕಿಂಗ್ ತಡೆಗಟ್ಟಿ; ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

Seat Blocking
Published on

ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅಕ್ರಮಗಳು ನಡೆಯುತ್ತಿರುವುದು ಚಿಂತೆಯ ವಿಚಾರ. ಸುಧಾರಣೆಯ ಪಥ ಸೃಷ್ಟಿಸಬೇಕಾದ ಶಿಕ್ಷಣ ವ್ಯವಸ್ಥೆ ಅಥವಾ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿಯೇ ಇಂಥ ಗಂಭೀರ ಅಪಸವ್ಯಗಳು ಕಂಡುಬರುವುದು ಸಮಾಜದ ಸ್ವಾಸ್ಥ್ಯಕ್ಕೆ ಮಾರಕ. ಈ ಪಿಡುಗು ಹಳೆಯದ್ದಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಂಡಿದೆ ಎಂಬುದು ಕಳವಳಕಾರಿ. ಹಾಗಾಗಿ, ಇಂಜಿನಿಯರಿಂಗ್ ಶಿಕ್ಷಣದಲ್ಲಿನ ಅಕ್ರಮಗಳ ಕಡಿವಾಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇಂಜಿನಿಯರಿಂಗ್​ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್ ಮುಂತಾದ ಕೋರ್ಸ್​ಗಳ ಸೀಟುಗಳನ್ನು ಬ್ಲಾಕ್ ಮಾಡಿ 50ರಿಂದ 80 ಲಕ್ಷ ರೂಪಾಯಿವರೆಗಿನ ಬೆಲೆಯಲ್ಲಿ ಮಾರಾಟ ಮಾಡುವ ದಂಧೆ ಕರ್ನಾಟಕದಲ್ಲಿ ಈ ಬಾರಿಯೂ ನಡೆದಿದೆ. ಇದರ ಸುಳಿವರಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸೀಟು ಸಿಕ್ಕರೂ ಅಡ್ಮಿಷನ್ ಮಾಡಿಸದ 2,348 ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್​ಗೆ ವಿದ್ಯಾರ್ಥಿಗಳು ಯಾವುದೇ ಉತ್ತರ ನೀಡಿಲ್ಲ. ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳ ಬ್ಲಾಕಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ. ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೆಲವು ಸಿಬ್ಬಂದಿ ಕೂಡ ಭಾಗಿಯಾಗಿರುವುದು ಆಘಾತಕಾರಿ ಸಂಗತಿ. ಸರ್ಕಾರಿ ಕೋಟಾದಡಿಯ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಒಂದು ಪ್ರಕರಣದಲ್ಲಿ ಕೆಇಎ ಸಿಬ್ಬಂದಿ ಸೇರಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇಂಥ ಹಲವು ಪ್ರಕರಣಗಳಿವೆ. ಹಾಗಾಗಿ ದಂಧೆಯ ಆಳ-ಅಗಲ ಅರಿಯಲು ಪೊಲೀಸರು ಮುಂದಾಗಬೇಕು. 52 ಅಭ್ಯರ್ಥಿಗಳ ಲಾಗಿನ್ ಹೆಸರು ಮತ್ತು ಪಾಸ್​ವರ್ಡ್ ಪಡೆದು ಸೀಟುಗಳು ಬ್ಲಾಕ್ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರ ಐಪಿ ವಿಳಾಸದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿಗಳು 150ಕ್ಕೂ ಹೆಚ್ಚಿನ ಸೀಟ್​ಗಳನ್ನು ಬ್ಲಾಕ್ ಮಾಡಿರುವುದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ. ಖಾಸಗಿ ಕಾಲೇಜಿನ ಕೆಲವು ವ್ಯಕ್ತಿಗಳು ಪ್ರತಿ ಸೀಟಿಗೆ 3 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು ಎಂದು ಆರೋಪಿಗಳು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ.

ವೃತ್ತಿಶಿಕ್ಷಣ ಕೋರ್ಸ್​ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಂತಹ ಪಾರದರ್ಶಕ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದು ಮಾದರಿಯಾಗಿದ್ದು ಕರ್ನಾಟಕ. ಆ ಮೂಲಕ ಕ್ಯಾಪಿಟೇಶನ್ ಶುಲ್ಕದ ದಂಧೆಗೆ ಕಡಿವಾಣ ಹಾಕಿದ ರಾಜ್ಯ ನಮ್ಮದು. ಆ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕೆಂದರೆ ಈಗಿನ ಸೀಟ್ ಬ್ಲಾಕಿಂಗ್ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ಅತ್ಯಗತ್ಯ. ಖಾಸಗಿ ಆಡಳಿತ ಮಂಡಳಿಗಳ ಈ ಕಳ್ಳಾಟದ ಬಗ್ಗೆ ರಾಜ್ಯ ಸರ್ಕಾರ ಕೂಲಂಕಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ, ಅವರಿಗೆ ಸರ್ಕಾರಿ ಕೋಟಾದ ಸೀಟು ತಪ್ಪಿಹೋಗದಂತೆ ಕಾಳಜಿ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net