

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಒಂದಿಲ್ಲೊಂದು ವಿಚಾರಗಳು ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಷರತ್ತುಗಳನ್ನು ವಿಧಿಸುವ ಮೂಲಕ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿಕೊಂಡಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಗೆ ಒಪ್ಪಿದರೂ ಅಲ್ಲಿನ ಮಾಜಿ ಆಟಗಾರರು ಮಾತ್ರ ಭಾರತದ ಬಗ್ಗೆ ಹೇಳಿಕೆಗಳನ್ನು ಮಾತ್ರ ನೀಡುವುದನ್ನು ನಿಲ್ಲಿಸುತ್ತಿಲ್ಲ.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akthar) ಭಾರತ ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ಬರಬೇಕೆಂದು ಹೇಳಿದ್ದು, ಇದಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶೋಯೆಬ್, ಪಾಕಿಸ್ತಾನದಲ್ಲಿ ಆಡಲು ಭಾರತ ತಂಡ ಹಾಗೂ ವಿರಾಟ್ ಕೊಹ್ಲಿ ನಮಗಿಂತ ಹೆಚ್ಚಾಗಿ ಕಾತುರರಾಗಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಲ್ಲಿ ನಡೆದರೆ ಟಿವಿ ಹಕ್ಕು ಹಾಗೂ ಪ್ರಾಯೋಜಕತ್ವ ದಾಖಲೆ ಸೃಷ್ಟಿಸುತ್ತದೆ. ಭಾರತದಲ್ಲಿ ಈಗಿರುವ ಸರ್ಕಾರದ ಕಾರಣದಿಂದಾಗಿ ಅವರು ಇಲ್ಲಿಗೆ ಆಡಲು ಬರುತ್ತಿಲ್ಲ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಇನ್ನೂ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ (Champions Trophy Hybrid Model) ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಆದರೆ ಈ ಒಪ್ಪಿಗೆಯ ಜೊತೆಗೆ ಪಿಸಿಬಿ ಐಸಿಸಿ ಮುಂದೆ ಪ್ರಮುಖ ಷರತ್ತುಗಳನ್ನಿಟ್ಟಿತ್ತು. ಆ ಪ್ರಕಾರ, ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕು ಎಂಬುದು ಪಿಸಿಬಿಯ ಪ್ರಮುಖ ಷರತ್ತಾಗಿತ್ತು. ಪಿಸಿಬಿಯ ಈ ಷರತ್ತಿನ ಬಗ್ಗೆ ಐಸಿಸಿ ಇದುವರೆಗೆ ಯಾವುದೇ ಉತ್ತರ ನೀಡಿಲ್ಲ. ಆದರೆ ಐಸಿಸಿಗೂ ಮುನ್ನ ಈ ಬಗ್ಗೆ ಮೌನ ಮುರಿದಿರುವ ಬಿಸಿಸಿಐ, ಪಿಸಿಬಿಯ ಈ ಷರತ್ತನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.